ಧಾರವಾಡ: ಜಿಲ್ಲೆಯಲ್ಲಿ ಪರವಾನಗಿ ನವೀಕರಿಸದೆ ಹಾಗೂ ನಿಯಮಾನುಸಾರ ವರದಿ ಸಲ್ಲಿಸದೆ ನಿಷ್ಕ್ರಿಯವಾಗಿರುವ 565 ಲೇವಾದೇವಿ ಸಂಸ್ಥೆಗಳ ವಿರುದ್ಧ ಸಹಕಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂದಿನ 15 ದಿನಗಳೊಳಗಾಗಿ ಸೂಕ್ತ ದಾಖಲೆ ಹಾಗೂ ವಿವರಣೆ ನೀಡದಿದ್ದಲ್ಲಿ ಅಂತಹ ಸಂಸ್ಥೆಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ನಿಂಗರಾಜ ಬೆಣ್ಣಿ ಅವರು ಎಚ್ಚರಿಕೆ ನೀಡಿದ್ದಾರೆ.
ನಿಯಮ ಉಲ್ಲಂಘನೆ ಹಿನ್ನೆಲೆ:
ಧಾರವಾಡ ಜಿಲ್ಲೆಯಲ್ಲಿ ಸದ್ಯ 814 ಲೇವಾದೇವಿಗಾರರು, 112 ಗಿರವಿದಾರರು ಹಾಗೂ 286 ಫೈನಾನ್ಸ್ ಕಾರ್ಪೊರೇಷನ್‌ಗಳು ಸೇರಿದಂತೆ ಒಟ್ಟು 1,212 ಲೇವಾದೇವಿಗಾರರು ನೋಂದಾಯಿತರಾಗಿದ್ದಾರೆ. ಆದರೆ, ಈ ಪೈಕಿ 399 ಲೇವಾದೇವಿಗಾರರು, 04 ಗಿರವಿದಾರರು ಹಾಗೂ 162 ಫೈನಾನ್ಸ್ ಕಾರ್ಪೊರೇಷನ್‌ಗಳು ಸೇರಿದಂತೆ ಒಟ್ಟು 565 ಸಂಸ್ಥೆಗಳು ಸಕ್ರಿಯವಾಗಿ ವ್ಯವಹಾರ ನಡೆಸುತ್ತಿಲ್ಲ. ಈ ಸಂಸ್ಥೆಗಳು 2020ಕ್ಕಿಂತ ಮುಂಚಿನಿಂದಲೂ ತಮ್ಮ ಅನುಮತಿ ಪತ್ರವನ್ನು ನವೀಕರಿಸಿಲ್ಲ ಹಾಗೂ ಪ್ರತಿ ತಿಂಗಳು ಸಲ್ಲಿಸಬೇಕಾದ ‘ಫಾರ್ಮ್ ನಂ. 6’ ಮತ್ತು ವಾರ್ಷಿಕ ‘ಫಾರ್ಮ್ ನಂ. 7’ ವರದಿಗಳನ್ನು ಇಲಾಖೆಗೆ ಸಲ್ಲಿಸುವಲ್ಲಿ ವಿಫಲವಾಗಿವೆ.
ಲಿಖಿತ ಹೇಳಿಕೆಗೆ ಸೂಚನೆ:
ಆದಕಾರಣ, ಈ ನೋಟಿಸ್ ಹೊರಡಿಸಿದ 15 ದಿನಗಳ ಒಳಗಾಗಿ ಸಂಬಂಧಪಟ್ಟ ಸಂಸ್ಥೆಗಳ ಮಾಲೀಕರು ಧಾರವಾಡದ ಯು.ಬಿ. ಹಿಲ್‌ನಲ್ಲಿರುವ ಡಾ. ಹಣಶೆಟ್ಟಿ ಬಿಲ್ಡಿಂಗ್‌ನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಹಾಜರಾಗಬೇಕು. ನವೀಕರಣ ಮಾಡದಿರಲು ಕಾರಣವೇನು ಎಂಬುದನ್ನು ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಾಜರಾಗದಿದ್ದಲ್ಲಿ, ಸರ್ಕಾರದ ನಿಯಮಾನುಸಾರ ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ದೂರವಾಣಿ ಸಂಖ್ಯೆ 9901044400 ಅಥವಾ 9964449347 ಗೆ ಸಂಪರ್ಕಿಸಬಹುದಾಗಿದೆ.

