
ನವಲಗುಂದ: ಪಟ್ಟಣದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 18ನೇ ವಾರ್ಷಿಕ ಸ್ನೇಹ ಸಮ್ಮೇಳನವು ಶಾಲಾ ಆವರಣದಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು. ಬಣ್ಣಬಣ್ಣದ ದೀಪಾಲಂಕಾರ ಹಾಗೂ ಸಾಂಸ್ಕೃತಿಕ ಕಳೆಗಟ್ಟಿದ ಶಾಲಾ ಆವರಣದಲ್ಲಿ ನಡೆದ ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ನೂರಾರು ಗಣ್ಯರು ಸಾಕ್ಷಿಯಾದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಅವರು ಮಾತನಾಡಿ, ಶಿಕ್ಷಣವು ಮನುಷ್ಯನ ಜೀವನದ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಶಿಸ್ತು, ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ ಹೊಂದುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕರಾದ ದೇವರಾಜ್ ದಾಡಿಬಾವಿ ಅವರು ಮಾತನಾಡಿ, ಸುಶಿಕ್ಷಿತ ಯುವಜನತೆಯಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಕಿ ಪೂರ್ಣಿಮಾ ಹೆಗಡೆ ಅವರು ಶಾಲೆಯ ವಾರ್ಷಿಕ ಸಾಧನಾ ವರದಿಯನ್ನು ವಾಚಿಸಿದರು. ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಮರಗೋಳದ ಸದ್ಗುರು ಬಸವಲಿಂಗ ಮಹಾಸ್ವಾಮಿಗಳು ಹಾಗೂ ಹಂದಿಗೋಳದ ಪರಮಪೂಜ್ಯ ಅಂಬು ಭಟ್ಟರು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಆಶೀರ್ವದಿಸಿದರು. ಸ್ನೇಹ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ನಡೆದ ವಿದ್ಯಾರ್ಥಿಗಳ ನೃತ್ಯ, ನಾಟಕ ಮತ್ತು ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ಸಮಾರಂಭದಲ್ಲಿ ಮುಖಂಡರಾದ ಅಶೋಕ್ ಮಜ್ಜಿಗುಡ್ಡ, ಸಿ.ಜಿ. ನಾವಳ್ಳಿ, ಸಂತೋಷ್ ಕುಮಾರ್ ಸಜ್ಜನ, ಶೋಭಾ ದಾಡಿಬಾವಿ, ಡಾ. ರಚನಾ ದಾಡಿಬಾವಿ, ಎಸ್.ವಿ. ಮುದಿಗೌಡರ, ಡಾ. ಸುಕೇತ್ ದಾಡಿಬಾವಿ, ಈರಣ್ಣ ಭಾಗವಾಡ, ಡಾ. ಸ್ವಾತಿ ದಾಡಿಬಾವಿ, ಸಂತೋಷ್ ಕುಮಾರ್ ಬಿ., ಸುರೇಶಗೌಡ ಪಾಟೀಲ ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು. ವಂದನಾರ್ಪಣೆಯ ನಂತರ ವಂದೇ ಮಾತರಂ ಗೀತೆಯೊಂದಿಗೆ ಸಮ್ಮೇಳನವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

