ಕಂಪ್ಲಿ ಉತ್ಸವಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ: ಕ್ಷೇತ್ರಕ್ಕೆ 3 ಸಾವಿರ ಹೊಸ ಮನೆಗಳ ಭರ್ಜರಿ ಕೊಡುಗೆ

Spread the love

ಬಳ್ಳಾರಿ: “ಕಂಪ್ಲಿ ವಿಧಾನಸಭಾ ಕ್ಷೇತ್ರದ ವಸತಿ ರಹಿತರ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ 2 ಸಾವಿರ ಮನೆಗಳನ್ನು ನೀಡಲಾಗಿತ್ತು. ಈಗ ಬರುವ ಹೊಸ ಆರ್ಥಿಕ ಸಾಲಿಗೆ ಹೆಚ್ಚುವರಿಯಾಗಿ 3 ಸಾವಿರ ಮನೆಗಳನ್ನು ಮಂಜೂರು ಮಾಡಲಾಗುವುದು. ಈ ಮೂಲಕ ಕೇವಲ ಎರಡೂವರೆ ವರ್ಷಗಳಲ್ಲಿ ಒಟ್ಟು 5 ಸಾವಿರ ಮನೆಗಳನ್ನು ಈ ಕ್ಷೇತ್ರಕ್ಕೆ ವಿತರಿಸಿದಂತಾಗುತ್ತದೆ” ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ಘೋಷಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಂಪ್ಲಿ ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆ ಮೈದಾನದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ‘ಕಂಪ್ಲಿ ಉತ್ಸವ’ಕ್ಕೆ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

​ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಾಧನೆಯನ್ನು ವಿವರಿಸಿದ ಸಚಿವರು, 2013 ರಿಂದ 2018ರ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ 14.58 ಲಕ್ಷ ಮನೆಗಳನ್ನು ವಿತರಿಸಲಾಗಿತ್ತು. ಆದರೆ ನಂತರದ ಮೈತ್ರಿ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಕೇವಲ 5 ಲಕ್ಷ ಮನೆ ನೀಡಲಾಗಿದ್ದು, ಅವು ಈಗ ಪೂರ್ಣಗೊಳ್ಳುವ ಹಂತದಲ್ಲಿವೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ ಮೊದಲ ಹಂತದಲ್ಲಿ 36,779 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ 42,345 ಹಾಗೂ ಜೂನ್ ತಿಂಗಳೊಳಗೆ ಮೂರನೇ ಹಂತದಲ್ಲಿ ಮತ್ತೊಂದು 36 ಸಾವಿರ ಮನೆಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಬಡವರ ಕಾಳಜಿ ಹೊಂದಿರುವ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಕ್ಷೇತ್ರಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ 3 ಸಾವಿರ ಕೋಟಿ ಅನುದಾನ ಬಂದಿದ್ದರೆ, ನಮ್ಮ ಸರ್ಕಾರ ಬಂದ ಕೇವಲ ಎರಡೂವರೆ ವರ್ಷದಲ್ಲಿ 2,500 ಕೋಟಿ ರೂ.ಗಳನ್ನು ನೀಡಿದೆ. ಕಂಪ್ಲಿ ಶಾಸಕ ಗಣೇಶ್ ಅವರ ನಿರಂತರ ಪರಿಶ್ರಮದಿಂದಾಗಿ ಇಂದು 70 ಲಕ್ಷ ರೂ. ವೆಚ್ಚದಲ್ಲಿ ಇಷ್ಟು ದೊಡ್ಡ ಮಟ್ಟದ ಉತ್ಸವ ಯಶಸ್ವಿಯಾಗಿ ಜರುಗುತ್ತಿದೆ ಎಂದು ಶ್ಲಾಘಿಸಿದರು.

​ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಮಾತನಾಡಿ, ಶಾಸಕ ಜೆ.ಎನ್. ಗಣೇಶ್ ಅವರು ಈ ಭಾಗದ ರೈತರ ಮತ್ತು ಜನಸಾಮಾನ್ಯರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುವ ‘ಸಹೃದಯಿ ಭಗೀರಥ’ನಂತೆ ಕೆಲಸ ಮಾಡುತ್ತಿದ್ದಾರೆ. ಈ ಉತ್ಸವದ ಅನುದಾನಕ್ಕಾಗಿ ಅವರು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಕೊಂಡಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಕ್ಷೇತ್ರದಲ್ಲಿ ಮಿನಿ ವಿಧಾನಸೌಧ, 100 ಹಾಸಿಗೆ ಆಸ್ಪತ್ರೆ, ಶಾಲೆ-ಕಾಲೇಜುಗಳು ಹಾಗೂ ಸೇತುವೆ ನಿರ್ಮಾಣದಂತಹ ಅಭಿವೃದ್ಧಿ ಪರ್ವವೇ ಆರಂಭವಾಗಿದೆ. ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ ಮುಖ್ಯ. ಎರಡು ಬಾರಿ ಗೆಲ್ಲಿಸಿದ ಈ ಕ್ಷೇತ್ರದ ಜನತೆಗೆ ರಾಜಕೀಯ ನಿವೃತ್ತಿಯ ನಂತರವೂ ನಾನು ಆಭಾರಿಯಾಗಿರುತ್ತೇನೆ ಎಂದು ನುಡಿದು ಭಾವುಕರಾದರು. ಇದೇ ವೇಳೆ ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯದ ಬಗ್ಗೆ ಮಾಹಿತಿ ನೀಡಿ, ರೈತರು ಭವಿಷ್ಯದ ಸುರಕ್ಷತೆಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.

​ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಬಳ್ಳಾರಿ ನಗರ ಶಾಸಕ ಮುಂಡರಗಿ ನಾಗರಾಜ್, ಪ್ರಮುಖರಾದ ಎಚ್. ಲಕ್ಷ್ಮಣ್, ಕೆ.ಇ. ಚಿದಾನಂದಪ್ಪ, ಶ್ರೀನಿವಾಸರಾವ್, ಹಬೀಬ್ ರೆಹಮಾನ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಖ್ಯಾತ ಗಾಯಕ ಚಂದನ್ ಶೆಟ್ಟಿ ಮತ್ತು ತಂಡದವರಿಂದ ನಡೆದ ರಸಮಂಜರಿ ಸಂಗೀತ ಕಾರ್ಯಕ್ರಮವು ನೆರೆದಿದ್ದ ಅಪಾರ ಜನಸ್ತೋಮವನ್ನು ರಂಜಿಸಿತು.

Leave a Reply

Your email address will not be published. Required fields are marked *