ಧರ್ಮಸ್ಥಳ ಪ್ರಕರಣ: ಕಾಂಗ್ರೆಸ್ ಶಾಮೀಲು, ಎನ್ಐಎ ತನಿಖೆಗೆ ವಹಿಸಿ’ – ಆರ್. ಅಶೋಕ್ ಗಂಭೀರ ಆರೋಪ

Spread the love

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪದ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ. ಈ ಕೃತ್ಯಗಳಿಗೆ ವಿದೇಶದಿಂದ ಹಣ ಬಂದಿರುವ ಸಾಧ್ಯತೆಗಳಿದ್ದು, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವೂ ಈ ಷಡ್ಯಂತ್ರದಲ್ಲಿ ಶಾಮೀಲು ಎಂದು ನಾವು ಭಾವಿಸಬೇಕಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೂರುದಾರನ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ರಚಿಸಿರುವುದು ದೊಡ್ಡ ತಪ್ಪು. ಇದರ ಹಿಂದೆ ಇರುವವರನ್ನು ಬಯಲಿಗೆಳೆಯಲು ಸರ್ಕಾರ ತಕ್ಷಣ ಮತ್ತೊಂದು ಎಸ್‌ಐಟಿ ರಚಿಸಬೇಕು” ಎಂದು ಪ್ರತಿಪಾದಿಸಿದರು.
‘ಪರಿಶೀಲಿಸದ ಆಡಳಿತ, ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ’
“ಧರ್ಮಸ್ಥಳ ಪ್ರಕರಣ ಆರಂಭವಾದಾಗಿನಿಂದಲೂ ಇದೊಂದು ಷಡ್ಯಂತ್ರ ಎಂದು ನಾನು ಹೇಳುತ್ತಲೇ ಇದ್ದೆ. ಈ ಮುಸುಕುಧಾರಿಯ ಹಿನ್ನೆಲೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ತಿಳಿದುಕೊಳ್ಳಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಪ್ರಗತಿಪರರ ಮಾತು ಕೇಳಿ ಎಸ್‌ಐಟಿ ರಚಿಸಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದರಿಂದ ಅನೇಕ ಭಕ್ತರಿಗೂ ನೋವು ಉಂಟಾಗಿದೆ. ಈ ಷಡ್ಯಂತ್ರದ ಹಿಂದೆ ಯಾವ ದೇಶದವರಿದ್ದಾರೆ ಎಂಬುದು ಎನ್‌ಐಎ ತನಿಖೆಯಿಂದ ಮಾತ್ರ ತಿಳಿಯುತ್ತದೆ” ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

‘ಮುಸ್ಲಿಂ ಯೂಟ್ಯೂಬರ್ ಮತ್ತು ಸಮೀರ್ ಬಂಧಿಸಿ’
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿದ ಮುಸ್ಲಿಂ ಯೂಟ್ಯೂಬರ್ ಒಬ್ಬನನ್ನು ಕೂಡಲೇ ಬಂಧಿಸಬೇಕು ಎಂದು ಅಶೋಕ್ ಒತ್ತಾಯಿಸಿದರು. “ಆತ ನಿರೀಕ್ಷಣಾ ಜಾಮೀನು ಪಡೆದಿದ್ದರೂ, ಪೊಲೀಸರು ಮೇಲ್ಮನವಿ ಸಲ್ಲಿಸಿ ಬಂಧಿಸುವ ಅವಕಾಶ ಪಡೆಯಬೇಕು” ಎಂದರು.
ಇದೇ ವೇಳೆ, ಈ ಪ್ರಕರಣದಲ್ಲಿ ಸುಳ್ಳು ದೂರು ನೀಡಿದ ಸುಜಾತಾ ಭಟ್ ಮತ್ತು ಯುವಕ ಸಮೀರ್ ಪಾತ್ರದ ಬಗ್ಗೆ ಗಂಭೀರ ಆರೋಪ ಮಾಡಿದ ಅಶೋಕ್, “ಇವೆಲ್ಲದರ ಹಿಂದೆ ಸಮೀರ್ ಎಂಬ ಯುವಕ ಇದ್ದಾನೆ. ಸಮೀರ್ ಒಬ್ಬ ಮುಸ್ಲಿಂ ಆಗಿದ್ದರೂ, ಆತನಿಗೆ ಈ ಪ್ರಕರಣದಲ್ಲಿ ಏಕೆ ಆಸಕ್ತಿ? ಅನೇಕ ಮಸೀದಿಗಳ ಮೇಲೆ ದೂರು ಬಂದಿದ್ದರೂ, ಅಲ್ಲಿ ನೆಲ ಅಗೆದಿಲ್ಲ. ಧರ್ಮಸ್ಥಳಕ್ಕೆ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ” ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಹೋರಾಟ ಇಲ್ಲದಿದ್ದರೆ ವಂಚನೆ’
ಪ್ರಕರಣದಲ್ಲಿ ಅನಾವಶ್ಯಕವಾಗಿ ಹಣದ ನಷ್ಟ ಮತ್ತು ಪೊಲೀಸರ ಶ್ರಮ ವ್ಯಯವಾಗಿದೆ. ಇದನ್ನು ಕಾಂಗ್ರೆಸ್ ಪಕ್ಷವೇ ಭರಿಸಬೇಕು. “ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿರಲಿಲ್ಲ ಎಂದಿದ್ದರೆ, ಯಾರೋ ದಾರಿಹೋಕ ಹೇಳಿದ್ದನ್ನು ನಂಬಿ, ಯಾವುದೋ ಬುರುಡೆ ತಂದು ವಂಚಿಸುತ್ತಿದ್ದರು. ಈ ರೀತಿಯ ಪ್ರಹಸನ ರಾಜ್ಯದ ಇತಿಹಾಸದಲ್ಲಿ ನಡೆದಿಲ್ಲ” ಎಂದು ಅಶೋಕ್ ಹೇಳಿದರು.

Leave a Reply

Your email address will not be published. Required fields are marked *