ಸನ್ಮಾರ್ಗದಲ್ಲಿ ಜೀವನ ಸಾಗಿಸಿ, ಧರ್ಮದ ಚ್ಯುತಿ ಬರದಂತೆ ಬದುಕಿ: ಮುನಿಶ್ರೀ ಪುಣ್ಯಸಾಗರ ಮಹಾರಾಜ ಕರೆ

Spread the love

ಕುಂದಗೋಳ: “ಮಾನವ ಜನ್ಮ ಅಮೂಲ್ಯವಾದುದು. ಶ್ರಾವಕರು ಮಾದಕ ವಸ್ತುಗಳು ಹಾಗೂ ಕಂದಮೂಲಗಳಿಂದ ದೂರವಿದ್ದು, ಜೈನ ಧರ್ಮದ ತತ್ವಗಳಿಗೆ ಚ್ಯುತಿ ಬರದಂತೆ ಸನ್ಮಾರ್ಗದಲ್ಲಿ ಜೀವನ ಸಾಗಿಸಬೇಕು” ಎಂದು 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ಕರೆ ನೀಡಿದರು.

​ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಮಂಗಳವಾರ ಜರುಗಿದ 1008 ಶ್ರೀ ಶಾಂತಿನಾಥ ತೀರ್ಥಂಕರ ನೂತನ ಬಸದಿಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಮೂರನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ಮೌಂಜಿ ಕಾರ್ಯಕ್ರಮ’ದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕ್ಷಣಿಕ ಸುಖದ ಆಸೆಗಾಗಿ ಅನಾರೋಗ್ಯಕರ ಆಹಾರ ಪದ್ಧತಿಗೆ ಬಲಿಯಾಗಬೇಡಿ. ವಿಶೇಷವಾಗಿ ಮಕ್ಕಳನ್ನು ಅಂತಹ ಆಹಾರದಿಂದ ದೂರವಿಟ್ಟು ಸಂಸ್ಕಾರಯುತವಾಗಿ ಬೆಳೆಸಬೇಕು ಎಂದು ಅವರು ತಿಳಿಸಿದರು.

​ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಂಹನಗದ್ದೆ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, “ಜೈನ ಧರ್ಮದಲ್ಲಿ 16 ವೃತ ಬಂಧಗಳಿದ್ದು, ಅದರಲ್ಲಿ ನಾಲ್ಕನೇ ವೃತವಾದ ಮೌಂಜಿ ಬಂಧವು ಅತ್ಯಂತ ಮುಖ್ಯವಾದುದು. ಈ ವೃತ ಧಾರಣೆ ಮಾಡಿದಾಗ ಮಾತ್ರ ವ್ಯಕ್ತಿಯು ಪೂರ್ಣ ಶ್ರಾವಕನಾಗುತ್ತಾನೆ. ವೃತಗಳ ಆಚರಣೆಯಿಂದ ಮಾತ್ರ ಜೀವನ ಸಾರ್ಥಕಗೊಳ್ಳಲು ಸಾಧ್ಯ. ಯುವ ಪೀಳಿಗೆಯು ಅಧರ್ಮದ ಹಾದಿ ಹಿಡಿಯದೆ ಧರ್ಮದ ಮಾರ್ಗದಲ್ಲಿ ನಡೆಯಬೇಕು” ಎಂದು ಕಿವಿಮಾತು ಹೇಳಿದರು.

​ಸೊಂದ ಮಠದ ಭಟ್ಟಾರಕ ಸ್ವಾಮೀಜಿ ಮಾತನಾಡಿ, “ಪಂಚ ಕಲ್ಯಾಣ ಮಹೋತ್ಸವಗಳು ಕೇವಲ ಆಡಂಬರವಲ್ಲ, ಅವು ಭಕ್ತರಿಗೆ ಧರ್ಮದ ದಾರಿ ತೋರುವ ಪವಿತ್ರ ಸಂಸ್ಕಾರಗಳಾಗಿವೆ” ಎಂದರು. ಈ ಸಂಸ್ಕಾರದ ಅಂಗವಾಗಿ ಸುಮಾರು 50ಕ್ಕೂ ಹೆಚ್ಚು ಬಾಲಕರು ಭಕ್ತಿಪೂರ್ವಕವಾಗಿ ಮೌಂಜಿ ಸಂಸ್ಕಾರ ಧಾರಣೆ ಮಾಡಿದರು.

​ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಶ್ರಾವಕರು ಹಾಗೂ ಜೈನ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *