
ವಿಜಯನಗರ: ಕೊಟ್ಟೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವಂತ ಭೀಕರ ತ್ರಿವಳಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆತ್ತ ತಂದೆ-ತಾಯಿ ಹಾಗೂ ತಂಗಿಯನ್ನು ಭೀಕರವಾಗಿ ಹತ್ಯೆಗೈದ ನರಹಂತಕ ಮಗ, ಮನೆಯ ಹಾಲ್‌ನಲ್ಲೇ ಶವಗಳನ್ನು ಹೂತಿಟ್ಟು ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ ತಿಲಕ್ ನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೇ ಕುಣಿಯಲ್ಲಿ ಹೂತಿಟ್ಟಿದ್ದ ಮೂರು ಮೃತದೇಹಗಳು ಪತ್ತೆಯಾಗಿವೆ. ಆರೋಪಿ ಅಕ್ಷಯ್ ತಂದೆ ಭೀಮರಾವ್ (50), ತಾಯಿ ಜಯಲಕ್ಷ್ಮಿ (45) ಮತ್ತು ತಂಗಿ ಎಚ್.ಅಮೃತಾ (17) ಅವರನ್ನು ಅಮಾನವೀಯವಾಗಿ ಕೊಂದು ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ್ದರೂ ಕೊನೆಗೂ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ.

ತನ್ನ ಕುಟುಂಬದವರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ನಾಪತ್ತೆಯಾಗಿದ್ದಾರೆಂದು ತಿಲಕ್ ನಗರ ಠಾಣೆಯಲ್ಲಿ ದೂರು ನೀಡಿದ್ದ ಅಕ್ಷಯ್‌ನ ವಿಚಿತ್ರ ನಡವಳಿಕೆಯಿಂದ ಪೊಲೀಸರಿಗೆ ಸಂಶಯ ಮೂಡಿತ್ತು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಅದರಂತೆ ಶನಿವಾರ ಬೆಳಗ್ಗೆ ಆರೋಪಿಯನ್ನು ಕೊಟ್ಟೂರಿನ ಮರಿ ಕೊಟ್ಟೂರೇಶ್ವರ ಬಡಾವಣೆಯ ಮನೆಗೆ ಕರೆತಂದ ಪೊಲೀಸರು ಸ್ಥಳ ಮಹಜರು ನಡೆಸಿದರು. ಹರಪನಹಳ್ಳಿ ಸಹಾಯಕ ಆಯುಕ್ತ ಸುರೇಶ ಕುಮಾರ್ ಹಾಗೂ ಜಿಲ್ಲಾ ಎಸ್ಪಿ ಎಸ್.ಜಾಹ್ನವಿ ಸಮ್ಮುಖದಲ್ಲಿ ಮನೆಯ ಹಾಲ್ ಅಗೆದಾಗ ನಾಲ್ಕು ಅಡಿ ಆಳದ ಒಂದೇ ಕುಣಿಯಲ್ಲಿ ಮೂರು ಶವಗಳು ಪತ್ತೆಯಾಗಿವೆ. ಈ ವೇಳೆ ಅಕ್ಷಯ್ ನಡೆಸಿದ ಕ್ರೌರ್ಯ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದು, ತಂದೆಯ ಶವ ಕುಣಿಯಲ್ಲಿ ಹಿಡಿಯದಿದ್ದಕ್ಕೆ ಎರಡೂ ಕಾಲುಗಳನ್ನು ತುಂಡರಿಸಿದ್ದ ಎನ್ನಲಾಗಿದೆ.
ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಎಸ್ಪಿ ಎಸ್.ಜಾಹ್ನವಿ ಅವರು, “ಕೊಲೆ ಯಾವ ದಿನ ನಡೆದಿದೆ ಮತ್ತು ಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸದ್ಯಕ್ಕೆ ತಿಲಕ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸ್ಥಳೀಯವಾಗಿ ನಾವು ಎಲ್ಲ ಸಹಕಾರ ನೀಡಿದ್ದೇವೆ. ಎಫ್‌ಐಆರ್‌ನಲ್ಲಿ ಅಕ್ಷಯ್ ಹಾಗೂ ವಸಂತ ಎಂಬುವವರ ಹೆಸರಿದೆ” ಎಂದು ಮಾಹಿತಿ ನೀಡಿದ್ದಾರೆ. ಇನ್ನು ಮೃತದೇಹಗಳನ್ನು ಹೊರತೆಗೆಯುವ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಯ ಮೇಲೆ ಹಲ್ಲೆ ನಡೆಸಲು ಜನ ಮುಂದಾಗಿದ್ದರು. ಪರಿಸ್ಥಿತಿ ನಿಯಂತ್ರಿಸಲು ಎರಡು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಭೀಕರ ಕೃತ್ಯ ಪಟ್ಟಣದ ಜನತೆಯನ್ನು ಭೀತಿಯಲ್ಲಿ ಮುಳುಗಿಸಿದೆ

