ಅರ್ಜಿ ವಿಲೇವಾರಿಗೆ ಆದ್ಯತೆ ನೀಡಿ, ನಿರ್ಲಕ್ಷ್ಯ ಬೇಡ: ಧಾರವಾಡದಲ್ಲಿ ರಾಜ್ಯ ಮಾಹಿತಿ ಆಯುಕ್ತರ ಸೂಚನೆ

Spread the love

ಧಾರವಾಡ: “ಮಾಹಿತಿ ಹಕ್ಕು ಅಧಿನಿಯಮ 2005 ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಜನಸ್ನೇಹಿ ಆಡಳಿತ ನೀಡಲು ಸರ್ಕಾರ ನೀಡಿರುವ ಅತ್ಯಂತ ಪ್ರಬಲ ಕಾಯ್ದೆಯಾಗಿದೆ. ಅಧಿಕಾರಿಗಳು ಅರ್ಜಿಗಳ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಬ್ಲಾಕ್‌ಮೇಲರ್‌ಗಳ ಸೃಷ್ಟಿಗೆ ಅವಕಾಶ ನೀಡದಂತೆ ಕಾಲಮಿತಿಯಲ್ಲಿ ಮಾಹಿತಿ ಒದಗಿಸಬೇಕು” ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರ ಹಾಗೂ ಅಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟಿ, ರಾಜಶೇಖರ ಎಸ್. ಹಾಗೂ ಪ್ರಕಾಶ ನಾರಾಯಣ ಚನ್ನಾಳ್ ಅವರು ಭಾಗವಹಿಸಿ ಮಾತನಾಡಿದರು.

​ಕೋಟಿಗಟ್ಟಲೆ ದಂಡದ ಎಚ್ಚರಿಕೆ:

​ಆಯುಕ್ತ ರುದ್ರಣ್ಣ ಹರ್ತಿಕೋಟಿ ಅವರು ಮಾತನಾಡಿ, “ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸದ ರಾಜ್ಯದ 10,769 ಅಧಿಕಾರಿಗಳಿಗೆ ಇದುವರೆಗೆ ಒಟ್ಟು 10.25 ಕೋಟಿ ರೂ. ದಂಡ ವಿಧಿಸಲಾಗಿದೆ. ಧಾರವಾಡ ಜಿಲ್ಲೆಯೊಂದರಲ್ಲೇ 95 ಅಧಿಕಾರಿಗಳಿಗೆ 9.09 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ಪೈಕಿ ಕೇವಲ 14 ಜನ ಮಾತ್ರ ದಂಡ ಪಾವತಿಸಿದ್ದಾರೆ. ದಂಡ ಪಾವತಿಸದಿದ್ದರೆ ಅಂತಹ ಅಧಿಕಾರಿಗಳ ನಿವೃತ್ತಿ ಸೌಲಭ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ಎಚ್ಚರಿಸಿದರು. ಧಾರವಾಡ ಜಿಲ್ಲೆಯು ಆಯೋಗಕ್ಕೆ ಸಲ್ಲಿಕೆಯಾಗುವ ಮೇಲ್ಮನವಿಗಳಲ್ಲಿ ರಾಜ್ಯದಲ್ಲೇ 7ನೇ ಸ್ಥಾನದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

​ಅಧಿಕಾರಿಗಳಿಗೆ ಪ್ರಮುಖ ನಿರ್ದೇಶನಗಳು:

  • ಫಲಕ ಅಳವಡಿಕೆ: ಪ್ರತಿ ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಮಾಹಿತಿ ಹೊಂದಿದ ಫಲಕ ಕಡ್ಡಾಯವಾಗಿರಬೇಕು.
  • ವಿಲೇವಾರಿ ಕ್ರಮ: ಕೇಳಿರುವ ಮಾಹಿತಿ ಲಭ್ಯವಿದ್ದರೆ ವಿಳಂಬ ಮಾಡಬಾರದು. ಬಿಡಿ ಬಿಡಿಯಾಗಿದ್ದಲ್ಲಿ ಅಥವಾ ಅಸ್ಪಷ್ಟವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬಹುದು. ಮಾಹಿತಿಯನ್ನು ಕ್ರೂಢೀಕರಿಸಿ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ.
  • ಕಪ್ಪು ಪಟ್ಟಿ: ಪದೇ ಪದೇ ಅರ್ಜಿ ಸಲ್ಲಿಸಿ ಅಧಿಕಾರಿಗಳನ್ನು ಬೆದರಿಸುವ ವ್ಯಕ್ತಿಗಳನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ಕಪ್ಪು ಪಟ್ಟಿಗೆ (Blacklist) ಸೇರಿಸಲಾಗಿದ್ದು, ರಾಜ್ಯದಲ್ಲೂ ಇಂತಹ ಕ್ರಮಗಳ ಬಗ್ಗೆ ಆಯೋಗ ಚಿಂತಿಸುತ್ತಿದೆ.
  • ಬಿಪಿಎಲ್ ಕಾರ್ಡ್ ಸೌಲಭ್ಯ: ಬಿಪಿಎಲ್ ಕಾರ್ಡ್ ಹೊಂದಿದವರಿಗೆ 100 ಪುಟಗಳವರೆಗೆ ಉಚಿತ ಮಾಹಿತಿ ನೀಡಬೇಕು. ಆದರೆ, ಇದರೊಂದಿಗೆ ಆದಾಯ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ.
  • ಸಿಸಿಟಿವಿ ದೃಶ್ಯಾವಳಿ: ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ನೀಡುವಾಗ ವಿಚಾರಣೆಗೆ ಸಂಬಂಧಿಸಿದ ಭಾಗ ಮಾತ್ರ ನೀಡಬೇಕು, ಉಳಿದ ಭಾಗವನ್ನು ಗೌಪ್ಯತೆ ದೃಷ್ಟಿಯಿಂದ ಮುಸುಕು (Mask) ಮಾಡಬೇಕು.

​ಆಡಳಿತಾತ್ಮಕ ಸುಧಾರಣೆ:

​ರಾಜಶೇಖರ ಎಸ್. ಅವರು ಮಾತನಾಡಿ, ಆನ್ಲೈನ್ ಅರ್ಜಿಗಳ ಬಗ್ಗೆ ಅಧಿಕಾರಿಗಳು ಜಾಗರೂಕರಾಗಿರಬೇಕು ಮತ್ತು ದಾಖಲೆಗಳನ್ನು ನಾಶಪಡಿಸಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ ದಂಡ ಅನಿವಾರ್ಯ ಎಂದರು. ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಜನವರಿ 2026 ರಿಂದ ಇದುವರೆಗೆ ಸಲ್ಲಿಕೆಯಾದ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಅಧಿಕಾರಿಗಳಲ್ಲಿ ಗೊಂದಲವಿದ್ದರೆ ಮೇಲ್ಮನವಿ ಪ್ರಾಧಿಕಾರದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದರು.

​ಕಾರ್ಯಾಗಾರದಲ್ಲಿ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ್ ಅವರು ಅಧಿಕಾರಿಗಳ ಪ್ರಶ್ನೆಗಳಿಗೆ ಸಂವಾದದ ಮೂಲಕ ಉತ್ತರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂದಾಯ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *