
ಶೌಚಾಲಯವಿಲ್ಲದೆ ಶಾಲೆಗೆ ಬರ್ತಿಲ್ಲ ಮಕ್ಕಳು
ಕುಂದಗೋಳ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿರುವುದು, ಇದ್ದರೂ ಬಹುತೇಕವು ದುರಸ್ತಿ ಅಗತ್ಯವಿರುವ ಸ್ಥಿತಿಯಲ್ಲಿ ಇರುವುದರಿಂದ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕುಂದಗೋಳದ ಬಿಜೆಪಿ ಶಾಸಕ ಎಂ.ಆರ್. ಪಾಟೀಲರು ಆರೋಪಿಸಿದರು.
ಗುರುವಾರ ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕುಂದಗೋಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರಿಗಳೇ ಸಲ್ಲಿಸಿದ ವರದಿ ಪ್ರಕಾರ 200 ಶೌಚಾಲಯಗಳ ಅಗತ್ಯವಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಕೇವಲ ಎರಡು ಶೌಚಾಲಯಗಳನ್ನು ಮಾತ್ರ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರದ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದ ಸ್ಥಿತಿ ಇದೆ. ಇನ್ನು 135ಕ್ಕೂ ಅಧಿಕ ಶೌಚಾಲಯಗಳು ದುರಸ್ತಿಗೆ ಒಳಪಟ್ಟಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂದು ಅವರು ಹೇಳಿದರು. ಕುಂದಗೋಳ ಕ್ಷೇತ್ರದಲ್ಲಿ ಒಟ್ಟು 149 ಪ್ರಾಥಮಿಕ ಹಾಗೂ 26 ಪ್ರೌಢಶಾಲೆಗಳಿದ್ದು, ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶೌಚಾಲಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕಿಯರೂ ಸಹ ಶಾಲೆಗಳಿಗೆ ಬರಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಪಾಟೀಲರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಮಗ್ರ ಕರ್ನಾಟಕ ಯೋಜನೆಯಡಿ 2025–26ನೇ ಸಾಲಿನಲ್ಲಿ ಶಾಲಾ ಶೌಚಾಲಯಗಳ ನಿರ್ಮಾಣಕ್ಕಾಗಿ 12.72 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಅಗತ್ಯತೆಗೆ ಅನುಗುಣವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಅನುಮೋದನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಶಾಲಾ ಶೌಚಾಲಯಗಳ ದುರಸ್ತಿ ಹಾಗೂ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

