ಹಿರೇಮಠದ ಶ್ರೀಗಳ ವಿರುದ್ಧ ಅಪಪ್ರಚಾರ ಖಂಡಿಸಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ

Spread the love

ನವಲಗುಂದ: ಪಟ್ಟಣದ ಇತಿಹಾಸ ಪ್ರಸಿದ್ಧ ಪಂಚಗ್ರಹ ಹಿರೇಮಠದ ಪೀಠಾಧ್ಯಕ್ಷರಾದ ಚ.ಬ್ರ.ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಅಪಪ್ರಚಾರ ಹಾಗೂ ತೇಜೋವಧೆಯನ್ನು ಖಂಡಿಸಿ, ಮಂಗಳವಾರ (ಜ.13) ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಸದ್ಭಕ್ತ ಮಂಡಳಿ ತಿಳಿಸಿದೆ.

​ಕೆಲವು ವ್ಯಕ್ತಿಗಳು ಶ್ರೀ ಮಠದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದು, ಇದರಿಂದ ತಾಲೂಕಿನ ಭಕ್ತ ಸಮೂಹಕ್ಕೆ ಮಾನಸಿಕವಾಗಿ ನೋವುಂಟಾಗಿದೆ. ಈ ಹಿನ್ನೆಲೆಯಲ್ಲಿ ಜ.10ರಂದು ನಡೆದ ಭಕ್ತರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಮಠದ ಆವರಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.

​ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಶ್ರೀ ಮಠದ ಹಾಗೂ ಸ್ವಾಮೀಜಿಗಳ ಗೌರವ ಕಾಪಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ತಾಲೂಕಿನ ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಮಠದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

Leave a Reply

Your email address will not be published. Required fields are marked *