ಗುಡಗೇರಿ ನಾಗರಾಜ ನಾ ಕುಲಕರ್ಣಿ ಆಶರ್ದ ಹಿ ಪ್ರಾ ಶಾಲಾ ಮುಂಬಾದಲ್ಲಿ ಸಂಭ್ರಮದ ‘ಮಕ್ಕಳ ಸಂತೆ’: ಪುಟ್ಟ ಕೈಗಳ ನಡುವೆ ಗರಿಗೆದರಿದ ವ್ಯಾಪಾರ ವಹಿವಾಟು

Spread the love

ಕುಂದಗೋಳ: “ಸರ್ ಈ ವರ್ಷದ ಕ್ಯಾಲೆಂಡರ್ ತೊಗೋಳಿ ಹತ್ತು ರೂಪಾಯಿ”, “ಬನ್ನಿ ಬನ್ನಿ ಬಿಸಿ ಬಿಸಿ ಮಿರ್ಚಿ ರುಚಿ ನೋಡಿ”, “ಎರಡು ಸೋಪು ತೊಗೊಂಡ್ರೆ ಒಂದು ಫ್ರೀ!”- ಹೀಗೆ ಹತ್ತಾರು ಬಗೆಯ ಕೂಗುಗಳು ಕೇಳಿಬರುತ್ತಿದ್ದುದು ಯಾವುದೋ ನಗರದ ದೊಡ್ಡ ಮಾರುಕಟ್ಟೆಯಲ್ಲಲ್ಲ, ಬದಲಾಗಿ ಗುಡಗೇರಿಯ ನಾಗರಾಜ ನಾ. ಕುಲಕರ್ಣಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ!

​ಇಲ್ಲಿ ಮಕ್ಕಳೇ ವ್ಯಾಪಾರಸ್ಥರು, ಗ್ರಾಮಸ್ಥರೇ ಗ್ರಾಹಕರು. ಶಾಲೆಯ ವತಿಯಿಂದ ಏರ್ಪಡಿಸಲಾಗಿದ್ದ ಈ ‘ಮಕ್ಕಳ ಸಂತೆ’ ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ದಾರಿಯಲ್ಲಿ ಹೋಗುವವರನ್ನು ಸೆಳೆದು ಮಂತ್ರಮುಗ್ಧರನ್ನಾಗಿಸಿತು. ಪುಟಾಣಿ ಮಕ್ಕಳು ಅತ್ಯಂತ ಚತುರತೆಯಿಂದ ಕೊತ್ತಂಬರಿ ಸೊಪ್ಪು, ಮೆಂತೆ, ಮೂಲಂಗಿಯಂತಹ ತರಕಾರಿಗಳನ್ನು ಮಾರುತ್ತಿದ್ದರೆ, ಇನ್ನೊಂದೆಡೆ ಬಿಸಿಬಿಸಿ ಪಾನಿಪುರಿ ಹಾಗೂ ಜಿಲೇಬಿಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಅಚ್ಚರಿಯ ವಿಷಯವೆಂದರೆ, ವ್ಯಾಪಾರ ಕುದುರಿಸಲು ಮಕ್ಕಳು ನೀಡುತ್ತಿದ್ದ ಆಫರ್‌ಗಳು ಮತ್ತು ಅವರ ವ್ಯಾವಹಾರಿಕ ಶೈಲಿಯನ್ನು ಕಂಡು ಪಾಲಕರು ಹಾಗೂ ಸಾರ್ವಜನಿಕರು ಫಿದಾ ಆಗಿದ್ದರು.

​ಶಾಲೆಯ ಮುಖ್ಯ ಶಿಕ್ಷಕರಾದ ಉಮೇಶ್ ಗದಗಿನಮಠ ಅವರು ಈ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲೇ ಮಾರುಕಟ್ಟೆಯ ನೇರ ಅನುಭವ ಮತ್ತು ವ್ಯಾವಹಾರಿಕ ಜ್ಞಾನವನ್ನು ಪಡೆಯುವ ನಿಟ್ಟಿನಲ್ಲಿ ಈ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ, ಪುಸ್ತಕದ ಪಾಠದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುವ ಈ ಅಪರೂಪದ ಸಂತೆಯು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುವುದರ ಜೊತೆಗೆ ಇಡೀ ಗ್ರಾಮಕ್ಕೆ ಮಾದರಿಯಾಗಿ ಗಮನ ಸೆಳೆಯಿತು.

Leave a Reply

Your email address will not be published. Required fields are marked *