
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ 1008 ಭಗವಾನ್ ಶಾಂತಿನಾಥ ತೀರ್ಥಂಕರ ಬಸದಿಯ ಪಂಚಕಲ್ಯಾಣ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಇದರ ಅಂಗವಾಗಿ ಸೋಮವಾರ ನೂತನ ಬಸದಿಯ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಹಾಲಗಂಬ ನೆಡುವ ಧಾರ್ಮಿಕ ಕಾರ್ಯಕ್ರಮ ಸಕಲ ವಿಧಿವಿಧಾನಗಳೊಂದಿಗೆ ಜರುಗಿತು.
ಮುಂಬರುವ ಫೆಬ್ರವರಿ 1 ರಿಂದ 6 ರವರೆಗೆ ಅದ್ಧೂರಿಯಾಗಿ ನಡೆಯಲಿರುವ ಪಂಚಕಲ್ಯಾಣ ಮಹೋತ್ಸವದ ಪೂರ್ವಭಾವಿ ವಿಧಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಶ್ರೀ 1008 ಭಗವಾನ್ ಮಹಾವೀರ ತೀರ್ಥಂಕರರ ಕೋಟೆ ಬಸದಿಯಲ್ಲಿ ಭಗವಂತನಿಗೆ ಪಂಚಾಮೃತ ಅಭಿಷೇಕದೊಂದಿಗೆ ಮಂಗಲ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ನಂತರ ನೂತನ ಬಸದಿಯ ಆವರಣದಲ್ಲಿ ಪಂಡಿತ್ ಪವನ್ ಹಾಗೂ ಸ್ಥಾನಿಕ ಪಂಡಿತ ರವಿ ಕುಲಕರ್ಣಿ ಅವರ ಪೌರೋಹಿತ್ಯದಲ್ಲಿ ಮಂತ್ರಘೋಷಗಳೊಂದಿಗೆ ಹಾಲಗಂಬವನ್ನು ಪ್ರತಿಷ್ಠಾಪಿಸಲಾಯಿತು. ಇದೇ ವೇಳೆ ಮಹೋತ್ಸವದ ಇಂದ್ರ–ಇಂದ್ರಾಣಿಯವರ ಮನೆಯಂಗಳದಲ್ಲಿ ಹಾಗೂ ಕಾರ್ಯಕ್ರಮ ಜರುಗುವ ಪ್ರಧಾನ ವೇದಿಕೆಯ ಸ್ಥಳದಲ್ಲಿಯೂ ಭಕ್ತಿ ಭಾವದಿಂದ ಹಾಲಗಂಬ ನೆಡಲಾಯಿತು.
ಈ ಮಂಗಲ ಕಾರ್ಯದಲ್ಲಿ ಶ್ರೀ ಶಾಂತಿನಾಥ ತೀರ್ಥಂಕರ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ತ್ರಿಶುಲಾ ಮಹಿಳಾ ಮಂಡಳದ ಸದಸ್ಯರು, ಶಾಂತಿನಾಥ ಯುವಕ ಮಂಡಲದ ಕಾರ್ಯಕರ್ತರು ಸೇರಿದಂತೆ ಜೈನ ಸಮಾಜದ ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಶ್ರಾವಕ–ಶ್ರಾವಕಿಯರು ಪಾಲ್ಗೊಂಡು ಮುಂಬರುವ ಮಹೋತ್ಸವಕ್ಕೆ ಶುಭ ಹಾರೈಸಿದರು.

