
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ಥಾನ ಉಳಿಸಿಕೊಳ್ಳಲು ಮತ್ತು ದಲಿತ ಸಿಎಂ ಕೂಗನ್ನು ತಡೆಯಲು ಬಲಾಡ್ಯ ಎಸ್ಸಿ ಸಮುದಾಯಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೆ ತರಲು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ನ್ಯಾ. ನಾಗಮೋಹನ್ ದಾಸ್ ವರದಿ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸುವ ಮೂಲಕ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ನಿಂದ ದ್ರೋಹ:
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕಾಲಕಾಲಕ್ಕೆ ಮೀಸಲಾತಿಯನ್ನು ಪರಿಷ್ಕರಿಸುವಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಕೇವಲ ಆರು ಜಾತಿಗಳಿಂದ ಆರಂಭವಾದ ಎಸ್ಸಿ ಪಟ್ಟಿಯಲ್ಲಿ ಈಗ 101 ಜಾತಿಗಳು ಸೇರಿವೆ. ಕಾಂಗ್ರೆಸ್ ಸರ್ಕಾರವು ಜಾತಿಗಳನ್ನು ಸೇರಿಸಿಕೊಂಡು ಹೋದರೂ, ಅದಕ್ಕೆ ತಕ್ಕಂತೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡದಿರುವುದು ದೊಡ್ಡ ದ್ರೋಹ ಎಂದು ಬೊಮ್ಮಾಯಿ ದೂರಿದರು.
ಬೊಮ್ಮಾಯಿ ಸರ್ಕಾರದಿಂದ ಮೀಸಲಾತಿ ಹೆಚ್ಚಳ:
“ನಾನು ಮುಖ್ಯಮಂತ್ರಿಯಾಗಿದ್ದಾಗ, ಎಸ್ಸಿ-ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಲು ನ್ಯಾ. ನಾಗಮೋಹನ ದಾಸ್ ಸಮಿತಿ ವರದಿಯನ್ನು ಪರಿಗಣಿಸಿದೆ. ಅದರಂತೆ, ಎಸ್ಸಿ ಸಮುದಾಯಕ್ಕೆ ಶೇ.15 ರಿಂದ ಶೇ.17 ಮತ್ತು ಎಸ್ಟಿ ಸಮುದಾಯಕ್ಕೆ ಶೇ.3 ರಿಂದ ಶೇ.7 ರಷ್ಟು ಮೀಸಲಾತಿ ಹೆಚ್ಚಿಸಿದೆ. ಈ ಕಾರಣದಿಂದಾಗಿ ಸಿದ್ದರಾಮಯ್ಯ ಅವರಿಗೆ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗಿದೆ” ಎಂದು ಬೊಮ್ಮಾಯಿ ತಿಳಿಸಿದರು.
ಅನ್ಯಾಯಕ್ಕೊಳಗಾದ ತಳಸಮುದಾಯಗಳು:
“ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಿಂದ ಸ್ವೀಪರ್, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಅಲೆಮಾರಿ ಸಮುದಾಯಗಳಿಗೆ ಒಂದೇ ಒಂದು ಪ್ರತಿಶತ ಮೀಸಲಾತಿಯೂ ಸಿಗುವುದಿಲ್ಲ. ಅದರಲ್ಲೂ, ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಸಮುದಾಯಗಳು ಮೈಸೂರು ಭಾಗದಲ್ಲಿಯೇ ಹೆಚ್ಚಾಗಿವೆ. ತಮ್ಮ ರಾಜಕೀಯ ಸ್ಥಾನವನ್ನು ಉಳಿಸಿಕೊಳ್ಳಲು ಬಲಾಡ್ಯ ಎಸ್ಸಿ ಜಾತಿಗಳ ಒತ್ತಡಕ್ಕೆ ಸಿಎಂ ಮಣಿದಿದ್ದಾರೆ. ನಾಗಮೋಹನ್ ದಾಸ್ ವರದಿ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸಿ ಮೂರು ಗುಂಪುಗಳನ್ನಾಗಿ ವಿಂಗಡಿಸಿ, ತಾಂತ್ರಿಕ ಕಾರಣಗಳನ್ನು ನೀಡಿ ಅನ್ಯಾಯ ಮಾಡಿದ್ದಾರೆ” ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. “ಇದಕ್ಕೆ ಯಾವ ಸಾಮಾಜಿಕ ನ್ಯಾಯ ಎಂದು ಅವರು ಪ್ರಶ್ನಿಸಿದರು.

