
ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಬಡವರ ಪರವಾಗಿ ನಾವು ಜಾರಿಗೆ ತಂದ ಕಾರ್ಯಕ್ರಮಗಳ ಬಗ್ಗೆ ಅದೇನು ಅವರ ಅಪ್ಪನ ಮನೆಯಿಂದ ತಂದ್ರಾ ಎಂದು ಕೆಲವರು ಟೀಕಿಸುತ್ತಾರೆ. ಹಾಗಾದರೆ ಬೇರೆಯವರಿಗೆ ಅಧಿಕಾರ ಸಿಕ್ಕಿದಾಗ ಯಾಕೆ ಅವರು ಬಡಜನರ ಪರವಾಗಿ ಕಾರ್ಯಕ್ರಮ ರೂಪಿಸಿಲ್ಲ?” ಎಂದು ಪ್ರಶ್ನಿಸಿದರು.
ಜನಪರ ಯೋಜನೆಗಳಿಗೆ ಬದ್ಧತೆ ಅಗತ್ಯ:
ಮುಖ್ಯಮಂತ್ರಿಗಳು, “ಅಧಿಕಾರದಲ್ಲಿರುವವರಿಗೆ ಬಡವರಿಗೆ ನೆರವಾಗುವ ಆಲೋಚನೆ ಮತ್ತು ಮನಸ್ಸು ಇದ್ದಾಗ ಮಾತ್ರ ಜನಪರ ಯೋಜನೆಗಳನ್ನು ರೂಪಿಸಲು ಸಾಧ್ಯ. ಉಪಕಾರ ಮಾಡಿದವರನ್ನು ನಾವು ಎಂದಿಗೂ ಮರೆಯಬಾರದು” ಎಂದು ಹೇಳಿದರು. ದೇವರಾಜ ಅರಸು ಅವರು ಎಲ್ಲ ವಿರೋಧಗಳ ನಡುವೆಯೂ ‘ಉಳುವವನೇ ಒಡೆಯ’ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದರು. ಅಲ್ಲದೆ, ಮಲಹೊರುವ ಪದ್ಧತಿ ಹಾಗೂ ಜೀತ ಪದ್ಧತಿಗಳನ್ನು ನಿಷೇಧಿಸಿರುವುದನ್ನು ಅವರು ನೆನಪಿಸಿಕೊಂಡರು.
ದೇವರಾಜ ಅರಸು ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರ ಪರವಾಗಿ ಪುತ್ರ ಅಜಿತ್ ಕಲ್ಲೆ ಭಾಷಣ ವಾಚಿಸಿದರು. ಅಲ್ಲದೆ, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸ್ಮರಿಸಲಾಯಿತು.
‘ಅರಸು ನಂತರ ನಾನೇ ದೀರ್ಘಕಾಲದ ಸಿಎಂ’:
ಭಾಷಣದ ವೇಳೆ ತಮ್ಮ ಹಾಗೂ ದೇವರಾಜ ಅರಸು ಅವರ ನಡುವಿನ ಕೆಲವು ಸಾಮ್ಯತೆಗಳನ್ನು ಸಿದ್ದರಾಮಯ್ಯ ಹಂಚಿಕೊಂಡರು. “ಡಿ. ದೇವರಾಜ ಅರಸು ಅವರು ಎಂಟು ವರ್ಷಗಳ ಕಾಲ ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದರು. ಅವರ ನಂತರ ದೀರ್ಘಕಾಲ ಆಳ್ವಿಕೆ ಮಾಡಿರುವುದು ನಾನೇ. ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರು, ನಾನು ಕೂಡ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ಇದು ನಮ್ಮ ನಡುವೆ ಇರುವ ಸಾಮ್ಯತೆ” ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, “ಅರಸು ಅವರ ಕಾಲದಲ್ಲಿಯೇ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಯಿತು. ಅದರ 50ನೇ ವರ್ಷವನ್ನು ಹಿಂದಿನ ಸರ್ಕಾರಗಳು ಮರೆತುಬಿಟ್ಟಿದ್ದವು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು” ಎಂದು ತಿಳಿಸಿದರು.

