ನವಲಗುಂದ ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಕೇಂದ್ರ ತಂಡದಿಂದ ವಿಸ್ತೃತ ಮಣ್ಣು ಸಮೀಕ್ಷೆ

Spread the love

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕೃಷಿ ಭೂಮಿಗಳಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಬೆಂಗಳೂರು ಕೇಂದ್ರದ ‘ಸಾಯಿಲ್ ಆಂಡ್ ಲ್ಯಾಂಡ್ ಯೂಸ್ ಸರ್ವೆ ಆಫ್ ಇಂಡಿಯಾ’ (SLUSI) ತಂಡವು ವಿಸ್ತೃತ ಮಣ್ಣು ಸಮೀಕ್ಷೆಯನ್ನು ಕೈಗೊಂಡಿದೆ.

​ಡಾ. ಮಲ್ಲಿಕಾರ್ಜುನ ರೂಡಗಿ, ಕೆ. ಮುರುಗಯ್ಯ ಮತ್ತು ನವೀನ್ ಕುಮಾರ್ ಅವರನ್ನೊಳಗೊಂಡ ತಂಡವು ಪ್ರಸ್ತುತ ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲ್ಲೂಕುಗಳು ಹಾಗೂ ಗದಗ ಜಿಲ್ಲೆಯ ನರಗುಂದ, ರೋಣ ಮತ್ತು ಗದಗ ತಾಲ್ಲೂಕುಗಳ ಕೃಷಿ ಭೂಮಿಯಲ್ಲಿ ಈ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ರಾಷ್ಟ್ರೀಯ ಮಣ್ಣು ನಕ್ಷೆ ಕಾರ್ಯಕ್ರಮದಡಿ ಗ್ರಾಮ ಮಟ್ಟದಲ್ಲಿ ಮಣ್ಣಿನ ಗುಣಲಕ್ಷಣಗಳ ನಿಖರ ಮಾಹಿತಿ ಸಂಗ್ರಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

​ಈ ಕುರಿತು ಮಾಹಿತಿ ನೀಡಿದ ಡಾ. ಮಲ್ಲಿಕಾರ್ಜುನ ಅವರು, “ಉಪಗ್ರಹ ಆಧಾರಿತ ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ತಂತ್ರಜ್ಞಾನವನ್ನು ಬಳಸಿ ಗ್ರಾಮ ಮಟ್ಟದಲ್ಲಿ ಡಿಜಿಟಲ್ ಡೇಟಾಬೇಸ್ ಸಿದ್ಧಪಡಿಸಲಾಗುತ್ತಿದೆ. ಈ ನಕ್ಷೆಗಳ ಮೂಲಕ ರೈತರು, ನೀತಿ ನಿರೂಪಕರು ಮತ್ತು ಸಂಶೋಧಕರಿಗೆ ಗ್ರಾಮ ಮಟ್ಟದ ಸೂಕ್ಷ್ಮ ಯೋಜನೆಗಳನ್ನು ರೂಪಿಸಲು ಅಗತ್ಯವಾದ ಮಾಹಿತಿ ಲಭ್ಯವಾಗಲಿದೆ,” ಎಂದು ತಿಳಿಸಿದರು.

​ಸಮೀಕ್ಷೆಯ ಮಹತ್ವದ ಬಗ್ಗೆ ಮಾತನಾಡಿದ ಕೆ. ಮುರುಗಯ್ಯ ಅವರು, “ಈ ಸಮೀಕ್ಷೆಯು ಮಣ್ಣಿನ ವಿಧಗಳು, ಅವುಗಳ ಸಾಮರ್ಥ್ಯ ಮತ್ತು ಭೂ ಸವೆತ, ಜೌಗು ಹಿಡಿಯುವಿಕೆ ಹಾಗೂ ಲವಣಾಂಶದಂತಹ ಸಮಸ್ಯೆಗಳನ್ನು ಗುರುತಿಸುತ್ತದೆ. ಇದರಿಂದ ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ನಿಖರವಾದ ಪೋಷಕಾಂಶಗಳ ಬಳಕೆಗೆ ಅನುಕೂಲವಾಗಲಿದ್ದು, ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಈ ವರದಿಯು ಮಣ್ಣಿನ ನಕ್ಷೆಗಳು, ಬೆಳೆಗಳ ಸೂಕ್ತತೆ ಮತ್ತು ಭೂಮಿಯ ನೀರಾವರಿ ಸಾಮರ್ಥ್ಯದ ಬಗ್ಗೆ ನಿರ್ಣಾಯಕ ಮಾಹಿತಿ ನೀಡಲಿದೆ,” ಎಂದರು.

​ಇದೇ ಸಂಸ್ಥೆಯ ಇತರ ಎರಡು ತಂಡಗಳಾದ ಡಾ. ಮಂಜುನಾಥ್ ಚಾರಿ ಕೆ., ಸಂಜಯ್ ಕಶ್ಯಪ್, ಅನುರಾಗ್ ಸಕ್ಸೇನಾ ಮತ್ತು ಕುಮಾರ್ ನಾಯಕ್ ಅವರು ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸುಸ್ಥಿರ ಕೃಷಿ ಮತ್ತು ಭೂ ನಿರ್ವಹಣೆಗೆ ಈ ಸಮೀಕ್ಷೆಯು ಅತ್ಯಂತ ಅಗತ್ಯವಾಗಿದೆ.

Leave a Reply

Your email address will not be published. Required fields are marked *