ಇನಾಂ ವೀರಾಪುರ ಮರ್ಯಾದೆ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಚಲವಾದಿ ಮಹಾಸಭಾದಿಂದ ಬೃಹತ್ ಪ್ರತಿಭಟನೆ

Spread the love


ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ದಲಿತ ಯುವಕನ ಪತ್ನಿಯ ಮರ್ಯಾದೆ ಹತ್ಯೆ ಹಾಗೂ ಯುವಕನ ಕುಟುಂಬದವರ ಮೇಲೆ ನಡೆದ ಭೀಕರ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹುಬ್ಬಳ್ಳಿಯ ಪ್ರಧಾನ ಅಂಚೆ ಕಚೇರಿ ಎದುರಿಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ನಂತರ ಪಾದಯಾತ್ರೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಅಮಾನುಷ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮಹಾಸಭಾ ಆಗ್ರಹಿಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎನ್. ಮಹೇಶ್ ಅವರು, ಮೃತ ಯುವತಿ ಮಾನ್ಯ ಹಾಗೂ ವಿವೇಕಾನಂದ ಪರಸ್ಪರ ಪ್ರೀತಿಸಿ ಕಳೆದ ಮೇ ತಿಂಗಳಿನಲ್ಲಿ ಕಾನೂನುಬದ್ಧವಾಗಿ ಉಪ ನೋಂದಣಿ ಇಲಾಖೆಯಲ್ಲಿ ಮದುವೆಯಾಗಿದ್ದರು. ಆದರೆ ಇದನ್ನು ಸಹಿಸದ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ್, ತಮ್ಮ ಕುಲಕ್ಕೆ ಅವಮಾನವಾಗಿದೆ ಎಂಬ ಕ್ರೋಧದಿಂದ ಸ್ವಂತ ಮಗಳನ್ನೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಡೀ ಕುಟುಂಬವೇ ಸೇರಿ ದಲಿತ ಯುವಕನ ಮನೆಗೆ ನುಗ್ಗಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗಾಗಲೇ ಕೆಲವರ ಬಂಧನವಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಚಲವಾದಿ ಸಮಾಜದ ಮುಖಂಡ ಮಾರುತಿ ದೊಡ್ಡಮನಿ ಮಾತನಾಡಿ, “ಹಿಂದೂ ನಾವೆಲ್ಲ ಒಂದು” ಎನ್ನುವವರು ಇಂತಹ ಘಟನೆಗಳು ನಡೆದಾಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದರೂ ಜಾತಿವಾದದ ಪಿಡುಗು ತೊಲಗದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ಇಂತಹ ಘಟನೆಗಳು ಮರುಕಳಿಸದಂತೆ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ನೊಂದ ಯುವಕನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವುದರ ಜೊತೆಗೆ ಸರ್ಕಾರದಿಂದ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಹಾಸಭಾದ ಜಿಲ್ಲಾ ಮುಖಂಡರಾದ ಪರಮೇಶ ಕಾಳೆ, ಚಂದ್ರಶೇಖರ ಯಾತಗೇರಿ, ಮಲ್ಲಿಕಾರ್ಜುನ ಬಿಳಾರ, ರವೀಂದ್ರ ಕಲ್ಯಾಣಿ, ಮಲ್ಲಿಕಾರ್ಜುನ ಯಾತಗೇರಿ, ಉಡಚಪ್ಪ ಕಾಕಣ್ಣವರ, ಲಕ್ಷ್ಮಣ ಬಕ್ಕಾಯಿ, ಗಣೇಶ ದೊಡ್ಡಮನಿ, ಶಂಕರ ಪಾತರದ, ವಿರೂಪಾಕ್ಷ ಚಲವಾದಿ, ಲಕ್ಷ್ಮಣ ಚಲವಾದಿ, ನಿಂಗರಾಜ ಹೊಸಮನಿ, ಅಂಬರೀಷ ಚಲವಾದಿ, ಶಿವು ಮುಡ್ಸಿಬಣ ಸೇರಿದಂತೆ ಶ್ರೀಮತಿ ಚೇತನಾ ಲಿಂಗದಾಳ, ಕಮಲಮ್ಮ ಹೊಸಮನಿ ಹಾಗೂ ನೂರಾರು ಹೋರಾಟಗಾರರು ಪಾಲ್ಗೊಂಡಿದ್ದರು.


Leave a Reply

Your email address will not be published. Required fields are marked *