
ಕುಂದಗೋಳ: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ‘ಧಾರವಾಡ ಸಂಸದ ಕ್ರೀಡಾ ಮಹೋತ್ಸವ–2025’ರ ಕುಂದಗೋಳ ವಿಧಾನಸಭಾ ಕ್ಷೇತ್ರ ಮಟ್ಟದ ಪಂದ್ಯಾವಳಿಗಳು ಅತ್ಯಂತ ಯಶಸ್ವಿಯಾಗಿ ಜರುಗಿದವು. ಪಟ್ಟಣದ ಹರಭಟ್ಟ ಹೈಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟವು ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತು.
ರಾತ್ರಿ ವೇಳೆ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಗಳಿಗಾಗಿ ಇಡೀ ಕ್ರೀಡಾಂಗಣವನ್ನು ವಿದ್ಯುತ್ ದೀಪಗಳಿಂದ ಭವ್ಯವಾಗಿ ಅಲಂಕರಿಸಲಾಗಿತ್ತು. ಈ ಕ್ರೀಡೋತ್ಸವದಲ್ಲಿ ಕಬಡ್ಡಿಯ 120 ತಂಡಗಳು, ಖೋ-ಖೋ ಆಟದ 48 ತಂಡಗಳು, ವಾಲಿಬಾಲ್ನ 74 ತಂಡಗಳು ಹಾಗೂ ವೈಯಕ್ತಿಕ ಕ್ರೀಡೆಗಳಲ್ಲಿ 275ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಪುರುಷರ ವಿಭಾಗದ ಅತ್ಯಂತ ರೋಚಕ ಖೋ-ಖೋ ಫೈನಲ್ ಪಂದ್ಯದಲ್ಲಿ ಸಂಶಿಯ ನ್ಯೂ ಸ್ಪೋರ್ಟ್ಸ್ ಕ್ಲಬ್ ತಂಡವು ಶಿರೂರಿನ ಸಾಯಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಶಿರೂರಿನ ಸಾಯಿ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆದರೆ, ಪಾಳೆಯದ ಭಗತ್ ಸಿಂಗ್ ಸ್ಪೋರ್ಟ್ಸ್ ಕ್ಲಬ್ ತೃತೀಯ ಸ್ಥಾನ ಗಳಿಸಿತು.
ಬಾಲಕಿಯರ ವಿಭಾಗದ ಖೋ-ಖೋ ಪಂದ್ಯದಲ್ಲಿ ಅಂಚಟಗೇರಿಯ ಯುವರತ್ನ ತಂಡವು ಪ್ರಥಮ ಸ್ಥಾನ ಪಡೆದಿತು. ಪಾಳೆಯದ ಭಗತ್ ಸಿಂಗ್ ತಂಡ ದ್ವಿತೀಯ, ಶಿರೂರಿನ ಸಾಯಿ ಸ್ಪೋರ್ಟ್ಸ್ ಕ್ಲಬ್ ತೃತೀಯ ಹಾಗೂ ಸಂಶಿಯ ನ್ಯೂ ಸ್ಪೋರ್ಟ್ಸ್ ಕ್ಲಬ್ ನಾಲ್ಕನೇ ಸ್ಥಾನ ಪಡೆದವು.
ವಾಲಿಬಾಲ್ ಅಂತಿಮ ಪಂದ್ಯದಲ್ಲಿ ಕುಬಿಹಾಳದ ತಂಡವು ಕಮಡೊಳ್ಳಿ ತಂಡವನ್ನು 2–0 (25/18, 25/17) ಅಂತರದಿಂದ ಮಣಿಸಿ ವಿಜೇತರಾಗಿ ಹೊರಹೊಮ್ಮಿತು. ಈ ಮೂಲಕ ಅವರು ಧಾರವಾಡ ಲೋಕಸಭಾ ಕ್ಷೇತ್ರ ಮಟ್ಟದ ಅಂತಿಮ ಪಂದ್ಯಾವಳಿಗೆ ಪ್ರವೇಶ ಪಡೆದರು.
ಕಬಡ್ಡಿ ಸ್ಪರ್ಧೆಯಲ್ಲಿ ಕುಂದಗೋಳ ಕ್ರೀಡಾ ಸಂಸ್ಥೆಯು ಅಗಡಿಯ ಶ್ರೀ ಮಾರ್ಕಂಡೇಯ ಕ್ರೀಡಾ ತಂಡವನ್ನು 14 ಅಂಕಗಳ ಅಂತರದಿಂದ ಸೋಲಿಸಿ ವಿನ್ನರ್ ಪಟ್ಟ ಅಲಂಕರಿಸಿತು. ಹಿರೇನರ್ತಿಯ ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತಂಡ ತೃತೀಯ ಸ್ಥಾನ ಪಡೆಯಿತು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 30,000 ರೂ., ದ್ವಿತೀಯ ಸ್ಥಾನಕ್ಕೆ 20,000 ರೂ., ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನಗಳಿಗೆ ತಲಾ 10,000 ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು. ವೈಯಕ್ತಿಕ ಕ್ರೀಡೆಗಳ ವಿಜೇತರಿಗೆ ಕ್ರಮವಾಗಿ 7,000 ರೂ., 5,000 ರೂ. ಮತ್ತು 3,000 ರೂ. ನಗದು ಬಹುಮಾನ ನೀಡಲಾಯಿತು.
ವೈಯಕ್ತಿಕ ಕ್ರೀಡೆಗಳ ಪುರುಷರ ಮುಕ್ತ ವಿಭಾಗದ 100 ಮೀ ಓಟದಲ್ಲಿ ಸಂಶಿಯ ಮಲ್ಲಿಕಾರ್ಜುನ ಸೂರಣಗಿ ಪ್ರಥಮ, ಪ್ರದೀಪ್ ಎಫ್. ಬಡ್ಡಿ ದ್ವಿತೀಯ ಹಾಗೂ ಚಿದಾನಂದ ಕಿತ್ತೂರ ತೃತೀಯ ಸ್ಥಾನ ಪಡೆದರು. 800 ಮೀ ಓಟದಲ್ಲಿ ಶಿರೂರಿನ ಮಲ್ಲಿಕಾರ್ಜುನ ಮಲ್ಲಕ್ಕನವರ ಪ್ರಥಮ, ಚಿದಾನಂದ ಕಿತ್ತೂರ ದ್ವಿತೀಯ ಹಾಗೂ ಕಿರಣ ಕಳಸಣ್ಣವರ ತೃತೀಯ ಸ್ಥಾನ ಗಳಿಸಿದರು. ಉದ್ದ ಜಿಗಿತದಲ್ಲಿ ಕುಬಿಹಾಳದ ವಿನಾಯಕ ರಡ್ಡರ ಪ್ರಥಮ, ಪ್ರವೀಣ ಗುಡಿಸಾಗರ ದ್ವಿತೀಯ ಹಾಗೂ ಸುಭಾಷಚಂದ್ರ ಗೌಡ ಕರೆಪ್ಪಗೌಡರ ತೃತೀಯ ಸ್ಥಾನ ಪಡೆದರು. ಎತ್ತರ ಜಿಗಿತದಲ್ಲೂ ವಿನಾಯಕ ರಡ್ಡರ ಪ್ರಥಮ ಸ್ಥಾನ ಪಡೆದರೆ, ಸುಲ್ತಾನ್ ನದಾಫ ದ್ವಿತೀಯ ಹಾಗೂ ಅಭಿಷೇಕ ಕಟಾವಿ ತೃತೀಯ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಕಮಡೊಳ್ಳಿಯ ಹುಸೇನ ಮನಸಾಲಿ ಪ್ರಥಮ, ಅಲ್ಲಿಸಾಬ ರಾಜೇಖಾನವರ ದ್ವಿತೀಯ ಹಾಗೂ ಸಚಿನ್ ಪುಟ್ಟಣ್ಣವರ ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ 17ರ ವಯೋಮಿತಿ ವಿಭಾಗದಲ್ಲಿ ವರೂರಿನ ಲಕ್ಷ್ಮೀ ಮಾಳಕೋಟಿ 100 ಮೀ ಓಟ, 800 ಮೀ ಓಟ ಹಾಗೂ ಉದ್ದ ಜಿಗಿತದ ಮೂರೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದರು. ಎತ್ತರ ಜಿಗಿತದಲ್ಲಿ ಹರ್ಲಾಪುರದ ಅನನ್ಯ ಹಿರೇಮಠ ಪ್ರಥಮ, ಸ್ನೇಹಾ ನಿಂಬಕ್ಕನವರ ದ್ವಿತೀಯ ಹಾಗೂ ಪಾರ್ವತಿ ಹಳೆಮನಿ ತೃತೀಯ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಗುಡಗೇರಿಯ ಲಕ್ಷ್ಮೀ ಹಿರೇಗೌಡರ ಪ್ರಥಮ, ತೇಜಸ್ವಿನಿ ವಾರದ ದ್ವಿತೀಯ ಹಾಗೂ ಅನನ್ಯ ಹಿರೇಮಠ ತೃತೀಯ ಸ್ಥಾನ ಗಳಿಸಿದರು.
ಬಾಲಕರ 17ರ ವಯೋಮಿತಿ ವಿಭಾಗದ 100 ಮೀ ಓಟದಲ್ಲಿ ಕಮಡೊಳ್ಳಿಯ ಮಾಂತೇಶ ಶಿಂಗಣ್ಣವರ ಪ್ರಥಮ, ಬಸವರಾಜ ಕರಿಮಠ ದ್ವಿತೀಯ ಹಾಗೂ ವಿಶ್ವನಾಥ ಗೋಡಿ ತೃತೀಯ ಸ್ಥಾನ ಪಡೆದರು. 800 ಮೀ ಓಟದಲ್ಲಿ ಕರಡಿಕೊಪ್ಪದ ಪ್ರಜ್ವಲ್ ನೆರ್ತಿ ಪ್ರಥಮ, ವಿಶ್ವನಾಥ ಗೋಡಿ ದ್ವಿತೀಯ ಹಾಗೂ ಶ್ರೀಶೈಲ ಕಂಬಿ ತೃತೀಯ ಸ್ಥಾನ ಗಳಿಸಿದರು. ಉದ್ದ ಜಿಗಿತದಲ್ಲಿ ಮಲ್ಲರಸಾಬ ಹನಸಿ ಪ್ರಥಮ, ವಿಜಯಕುಮಾರ ಅಣ್ಣಿಗೇರಿ ದ್ವಿತೀಯ ಹಾಗೂ ಮಣಿಕಂಠ ಜನ್ನರ ತೃತೀಯ ಸ್ಥಾನ ಪಡೆದರು. ಎತ್ತರ ಜಿಗಿತದಲ್ಲಿ ರೇವಡಿಹಾಳದ ಬಸವರಾಜ ಹರಿಜನ ಪ್ರಥಮ, ರಾಮ ಒಂಟೆತ್ತಿನ ದ್ವಿತೀಯ ಹಾಗೂ ಪ್ರಜ್ವಲ್ ನೆರ್ತಿ ತೃತೀಯ ಸ್ಥಾನ ಗಳಿಸಿದರು. ಗುಂಡು ಎಸೆತದಲ್ಲಿ ಕುಬಿಹಾಳದ ಮಿಥುನಕುಮಾರ ಕುಂಬಾರ ಪ್ರಥಮ, ಸಮೀರ ಅಹ್ಮದ ನದಾಫ ದ್ವಿತೀಯ ಹಾಗೂ ಸೃಜನ ತೋಟದ ತೃತೀಯ ಸ್ಥಾನ ಪಡೆದರು.
ಬಾಲಕಿಯರ 17ರ ವಯೋಮಿತಿ ವಿಭಾಗದ 100 ಮೀ ಓಟದಲ್ಲಿ ಯರೇಬೂದಿಹಾಳದ ದಿವ್ಯಶ್ರೀ ಕಟ್ಟಿಮನಿ ಪ್ರಥಮ, ಮಲ್ಲಿಕಾ ಶೆರೇವಾಡ ದ್ವಿತೀಯ ಹಾಗೂ ಪ್ರಣಮ್ಯ ಹಡಗಲಿ ತೃತೀಯ ಸ್ಥಾನ ಪಡೆದರು. 800 ಮೀ ಓಟದಲ್ಲಿ ಹಿರೇಹರಕುಣಿಯ ಸ್ಪಂದನಾ ಗಾಣಿಗೇರ ಪ್ರಥಮ, ಮಲ್ಲಿಕಾ ಶೆರೇವಾಡ ದ್ವಿತೀಯ ಹಾಗೂ ಪಲ್ಲವಿ ಮಠಪತಿ ತೃತೀಯ ಸ್ಥಾನ ಗಳಿಸಿದರು. ಉದ್ದ ಜಿಗಿತದಲ್ಲಿ ಕುಂದಗೋಳದ ಪೂಜಾ ಪ್ರಧಾನಿ ಪ್ರಥಮ, ಪ್ರಣಮ್ಯ ಹಡಗಲಿ ದ್ವಿತೀಯ ಹಾಗೂ ಮಲ್ಲಿಕಾ ಶೆರೇವಾಡ ತೃತೀಯ ಸ್ಥಾನ ಪಡೆದರು. ಎತ್ತರ ಜಿಗಿತದಲ್ಲಿ ಅದರಗುಂಚಿಯ ಗಂಗಮ್ಮ ಕಲಶೆಟ್ಟಿ ಪ್ರಥಮ, ಪ್ರಣಮ್ಯ ಹಡಗಲಿ ದ್ವಿತೀಯ ಹಾಗೂ ಸಂಜನಾ ಮಾಯಣ್ಣವರ ತೃತೀಯ ಸ್ಥಾನ ಗಳಿಸಿದರು. ಗುಂಡು ಎಸೆತದಲ್ಲಿ ಸಂಶಿಯ ಭಾವನಾ ಅಂಗಡಿ ಪ್ರಥಮ, ಪ್ರಿಯಾಂಕ ತಂಗಣ್ಣವರ ದ್ವಿತೀಯ ಹಾಗೂ ಅಂಕಿತಾ ಶೆರೇವಾಡ ತೃತೀಯ ಸ್ಥಾನ ಪಡೆದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಶ್ರೀ ಅಭಿನವ ಬಸವಣ್ಣಜ್ಜರು ಸಾನ್ನಿಧ್ಯ ವಹಿಸಿ ಕ್ರೀಡಾಪಟುಗಳಿಗೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿ ಹಾರೈಸಿದರು.

