

ಧಾರವಾಡ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸೇರಿದ ಧಾರವಾಡದ ಫಾರ್ಮ್‌ಹೌಸ್‌ನಲ್ಲಿ ದರೋಡೆ ನಡೆದಿದ್ದು, ಈ ಸಂಬಂಧ 15 ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಆಗಸ್ಟ್ 13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ತಾಲ್ಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿ ಇರುವ ‘ಮಮತಾ’ ಎಂಬ ಫಾರ್ಮ್‌ಹೌಸ್‌ಗೆ ಆಗಸ್ಟ್ 13ರಂದು ರಾತ್ರಿ ಸುಮಾರು 8-10 ಜನರ ಗುಂಪೊಂದು ನುಗ್ಗಿದೆ. ಫಾರ್ಮ್‌ಹೌಸ್‌ನಲ್ಲಿ ಮಲಗಿದ್ದ ಕಣ್ಣಪ್ಪ ಜಡ್ಡಿ, ಹನುಮಂತ ಧನದಾವರ್, ಅಶೋಕ ಪೋತಲಿ ಮತ್ತು ಲಕ್ಷ್ಮಣ ಚಂದರಗಿ ಎಂಬುವವರನ್ನು ಎಬ್ಬಿಸಿ, ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಬಾಯಿಗೆ ಗಮ್ ಟೇಪ್ ಅಂಟಿಸಿ ಅವರ ಬಳಿ ಇದ್ದ ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ಅಂತರ ಜಿಲ್ಲಾ ದರೋಡೆಕೋರರ ತಂಡ
ಘಟನೆಯ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದರೋಡೆಕೋರರ ಬಗ್ಗೆ ಲಭ್ಯವಾದ ಮಾಹಿತಿಯನ್ನು ಆಧರಿಸಿ, ಪೊಲೀಸರು ಕಾರ್ಯಾಚರಣೆ ನಡೆಸಿದರು. ತನಿಖೆ ವೇಳೆ 15 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರೇ ದರೋಡೆ ಕೃತ್ಯ ಎಸಗಿದ್ದಾರೆ ಎಂಬುದು ದೃಢಪಟ್ಟಿದೆ. ಈ ತಂಡವು ಅಂತರ ಜಿಲ್ಲಾ ದರೋಡೆಕೋರರ ಗುಂಪಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ವಾಹನ ಮತ್ತು ಮೊಬೈಲ್ ಫೋನ್‌ಗಳ ಜಪ್ತಿ
ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಂಧಿತರಿಂದ ಒಟ್ಟು 16 ಮೊಬೈಲ್ ಫೋನ್‌ಗಳು ಮತ್ತು 7 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಫಾರ್ಮ್‌ಹೌಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಆಗಾಗ ಭೇಟಿ ನೀಡಿರುವುದು ವಿಶೇಷ.

