ವಿದ್ಯಾರ್ಥಿಗಳ ಆಹಾರ ಕಾಳಸಂತೆಯಲ್ಲಿ ಮಾರಾಟ ಆರೋಪ: ಮತ್ತಿಗಟ್ಟಿ ಮೂರಾರ್ಜಿ ವಸತಿ ಶಾಲೆಯಲ್ಲಿ 162 ಚೀಲ ಅಕ್ಕಿ ನಾಪತ್ತೆ!

Spread the love

“ಮಕ್ಕಳ ಸತ್ತರೆ ಏನು ಮಾಡ್ತೀರಿ ನೀವು?”: ಪ್ರಾಂಶುಪಾಲರ ವಿರುದ್ಧ ತಹಶೀಲ್ದಾರ್ ರಾಜು ಮಾವರಕರ ಕೆಂಡಾಮಂಡಲ; ನಿರ್ಲಕ್ಷ್ಯಕ್ಕೆ ನೋಟಿಸ್ ನೀಡಿ ಕ್ರಮದ ಎಚ್ಚರಿಕೆ

ಕುಂದಗೋಳ, ಡಿ. 12: ತಾಲ್ಲೂಕಿನ ಮತ್ತಿಗಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೃಹತ್ ಪ್ರಮಾಣದ ಪಡಿತರ ಆಹಾರ ಸಾಮಗ್ರಿಗಳು ಕಾಣೆಯಾಗಿರುವ ಮತ್ತು ಅಸ್ವಚ್ಛತೆಯಿಂದ ಹಾಳಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ರಾಜು ಮಾವರಕರ ಅವರು ಶಾಲೆಯ ಪ್ರಾಂಶುಪಾಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ನೋಟಿಸ್ ನೀಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಡಿಸೆಂಬರ್ 9 ರಂದು ವಸತಿ ಶಾಲೆಗೆ ಪೂರೈಕೆಯಾಗಿದ್ದ ಒಟ್ಟು 162 ಚೀಲ ಅಕ್ಕಿ ಮೂಟೆಗಳು ಶುಕ್ರವಾರದಂದು (ಡಿಸೆಂಬರ್ 12) ದಾಸ್ತಾನು ಕೊಠಡಿಯಲ್ಲಿ ಇರದಿರುವುದು ತಹಶೀಲ್ದಾರ್ ಅವರ ಪರಿಶೀಲನೆಯ ವೇಳೆ ದೃಢಪಟ್ಟಿದೆ. ನಮ್ಮ ಕರ್ನಾಟಕ ಜನಪರ ಸಂರಕ್ಷಣಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ದೊಡ್ಡಮನಿ ಅವರು ಮನವಿ ಪತ್ರ ನೀಡಿ, ಶಾಲೆಯಲ್ಲಿ ಅಕ್ಕಿ-ಗೋಧಿಯ ದಾಸ್ತಾನು ಕೊರತೆಯ ಬಗ್ಗೆ ಗಮನ ಸೆಳೆದ ಹಿನ್ನೆಲೆ ಈ ಮಹತ್ವದ ಪರಿಶೀಲನೆ ನಡೆದಿದೆ.

ಪ್ರಾಚಾರ್ಯರ ವಿರುದ್ಧ ತೀವ್ರ ಆಕ್ರೋಶ
ದಾಸ್ತಾನು ಕೊಠಡಿಯಲ್ಲಿ ಅಕ್ಕಿ ಮೂಟೆಗಳು ನಾಪತ್ತೆಯಾಗಿರುವ ಮತ್ತು ಅಕ್ಕಿಗೆ ಫಂಗಸ್ ಹಿಡಿದು ನೆಲಕ್ಕೆ ಬಿದ್ದು ಹಾಳಾಗಿರುವ ನಿರ್ಲಕ್ಷ್ಯದ ಪರಿಸ್ಥಿತಿಯನ್ನು ಕಂಡ ತಹಶೀಲ್ದಾರ್ ರಾಜು ಮಾವರಕರ ಅವರು ವಸತಿ ಶಾಲೆ ಪ್ರಾಚಾರ್ಯರಾದ ಮಧುಕರ ಬೋಸ್ಲೆ ಅವರ ಮೇಲೆ ಕೆಂಡಾಮಂಡಲರಾದರು. ವಿದ್ಯಾರ್ಥಿಗಳ ಆಹಾರದ ವಿಷಯದಲ್ಲಿ ನಡೆಯುತ್ತಿರುವ ಗಂಭೀರ ಅವ್ಯವಸ್ಥೆಗೆ ಸಂಬಂಧಿಸಿದಂತೆ ನೇರವಾಗಿ ಪ್ರಶ್ನಿಸಿದ ತಹಶೀಲ್ದಾರ್ ಅವರು, “ಮಕ್ಕಳ ಸತ್ತರೆ ಏನು ಮಾಡ್ತೀರಿ ನೀವು? ನೀವು ಜವಾಬ್ದಾರಿ ಇದ್ದವರು ಉತ್ತರ ನೀವು ಕೊಡ್ತೀರಿ ಏನು?” ಎಂದು ತೀವ್ರ ಸ್ವರದಲ್ಲಿ ಗದರಿಸಿದ್ದಾರೆ.

ದಾಸ್ತಾನು ಕೊಠಡಿಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಗೋಣಿಚೀಲಗಳನ್ನು ನೆಲಕ್ಕೆ ಮತ್ತು ಗೋಡೆಗೆ ತಾಗಿಕೊಂಡು ರಾಶಿ ಹಾಕಲಾಗಿತ್ತು. ಕೋಣೆಯ ದುಸ್ಥಿತಿ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ತಹಶೀಲ್ದಾರ್ ಅವರು, “ಇದು ಶೋರೂಂ ಆಗಿದೆಯೇ? ಇಷ್ಟು ದೊಡ್ಡ ಪ್ರಿಮೈಸ್‌ನಲ್ಲಿ ನಿಮಗೆ ಇರಲಿಕ್ಕೆ ಒಂದು ರೂಂ ಸಿಗಲಿಲ್ಲ ಎಲ್ಲಿ ನಿಮಗೆ?” ಎಂದು ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಸಂಪತ್‌ಕುಮಾರ್ ನಾಯ್ಕ್ ರಜೆಯ ಮೇಲೆ ಇರುವುದು ಸಹ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತಕ್ಷಣವೇ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ ತಹಶೀಲ್ದಾರ್ ಅವರು, ಈ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳ ಪಡಿತರದಲ್ಲಿ ನಡೆದಿದೆ ಎನ್ನಲಾದ ಈ ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *