
ಧಾರವಾಡ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) 2025 ಅನ್ನು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಡಿಸೆಂಬರ್ 07, 2025 ರಂದು ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಪರೀಕ್ಷೆಗೆ ಒಟ್ಟು 12,164 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಅರ್ಹತಾ ಪರೀಕ್ಷೆ-2025ರ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎರಡು ಅವಧಿಗಳಲ್ಲಿ ಪರೀಕ್ಷೆ
ಶಿಕ್ಷಕರ ಅರ್ಹತಾ ಪರೀಕ್ಷೆಯು ಡಿ. 7 ರಂದು ಎರಡು ಅವಧಿಗಳಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ 12.00 ಗಂಟೆಯವರೆಗೆ ಮೊದಲ ಅವಧಿ ಹಾಗೂ ಮಧ್ಯಾಹ್ನ 2.00 ರಿಂದ 4.30 ರವರೆಗೆ ಎರಡನೇ ಅವಧಿಯ ಪರೀಕ್ಷೆ ನಡೆಯಲಿದೆ.
ಜಿಲ್ಲೆಯಲ್ಲಿ ಒಟ್ಟು 46 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಹುಬ್ಬಳ್ಳಿ ಶಹರದಲ್ಲಿ 24 ಮತ್ತು ಧಾರವಾಡ ಶಹರದಲ್ಲಿ 22 ಕೇಂದ್ರಗಳು ಸೇರಿವೆ. ಬೆಳಗಿನ ಅವಧಿಯ ಪರೀಕ್ಷೆಗೆ ಧಾರವಾಡದಲ್ಲಿ 1 ಮತ್ತು ಹುಬ್ಬಳ್ಳಿ ಶಹರದಲ್ಲಿ 13 ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಒಟ್ಟು 3,339 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಮಧ್ಯಾಹ್ನದ ಅವಧಿಗೆ 46 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 12,164 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ
ಶಿಕ್ಷಕರ ಅರ್ಹತಾ ಪರೀಕ್ಷೆಯು ಉದ್ಯೋಗ ಪಡೆಯಲು ಇರುವ ಅರ್ಹತಾ ಪರೀಕ್ಷೆಯಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಅಭ್ಯರ್ಥಿಗಳು ಮೊಬೈಲ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಅತ್ಯಾಧುನಿಕ ತಾಂತ್ರಿಕ ಸಾಧನಗಳನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಪರೀಕ್ಷೆಗಾಗಿ ಸೂಕ್ತ ಭದ್ರತೆ, ನಿಗದಿತ ಅವಧಿಗೆ ಪರೀಕ್ಷೆಗಳನ್ನು ಆರಂಭಿಸಿ ಮುಕ್ತಾಯಗೊಳಿಸಬೇಕು. ಯಾವುದೇ ಗೊಂದಲಗಳಾಗದಂತೆ ಪರೀಕ್ಷಾ ಪೂರ್ವದಲ್ಲಿಯೇ ಅಭ್ಯರ್ಥಿಗಳಿಗೆ ನಿಯಮಗಳನ್ನು ತಿಳಿಸಿ, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ಜರುಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭದ್ರತೆ ಮತ್ತು ಅಗತ್ಯ ಸೌಲಭ್ಯ
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸಿಆರ್ಪಿಸಿ ಕಲಂ 144 ಜಾರಿಗೊಳಿಸುವಂತೆ ಸೂಚಿಸಲಾಯಿತು. ಅಲ್ಲದೆ, 200 ಮೀಟರ್ ಪ್ರದೇಶದೊಳಗಿನ ಝರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ವಿದ್ಯುತ್ ನಿಲುಗಡೆಯಾಗದಂತೆ ಎಸ್ಕಾಂ (ಹೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷಾ ಕಾರ್ಯವನ್ನು ಸುಗಮಗೊಳಿಸಲು ಜಿಲ್ಲೆಯ 7 ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಚೇರಿಯ ಶಿಕ್ಷಣಾಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 17 ಅಧಿಕಾರಿಗಳನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ, ಡಯಟ್ ಪ್ರಾಚಾರ್ಯ ಬಸವರಾಜ ನಲವತ್ತವಾಡ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ಧನಗೌಡರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೆದಮನಿ ಅವರು ಸಭೆ ನಿರ್ವಹಿಸಿ ವಂದಿಸಿದರು. ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ನಿರೀಕ್ಷಕರು, ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಡಯಟ್ ಉಪನ್ಯಾಸಕರು ಮತ್ತು ಹಿರಿಯ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.

