ದತ್ತು ಮಾಸಾಚರಣೆ: ಜಾಗೃತಿ ಕಾರ್ಯಕ್ರಮಗಳಲ್ಲಿ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನದ ಗೌರವ

Spread the love

ಧಾರವಾಡ: ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಅತ್ಯುತ್ತಮವಾಗಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಕ್ಕಾಗಿ ಧಾರವಾಡ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರು ನವೆಂಬರ್ 29, ರಂದು ಬೆಂಗಳೂರಿನ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ದತ್ತು ಪೋಷಕರ ಸಮಾವೇಶ ಕಾರ್ಯಕ್ರಮದಲ್ಲಿ ಈ ಗೌರವವನ್ನು ನೀಡಿ ಸನ್ಮಾನಿಸಲಾಯಿತು.

​ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ ಮಾಹೆಯಲ್ಲಿ ಕಾನೂನು ಬದ್ಧ ದತ್ತು ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕ್ರಿಯಾ ಯೋಜನೆ ನೀಡಿತ್ತು.

​ಧಾರವಾಡ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಚಿತ್ರನಟರು, ಜಾನಪದ ಕಲಾವಿದರು ಮತ್ತು ಪ್ರಖ್ಯಾತ ಗಣ್ಯವ್ಯಕ್ತಿಗಳಿಂದ ಕಾನೂನು ಬದ್ಧ ದತ್ತು ಕುರಿತು ಸಂದೇಶವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಕಾರ್ತಿಕ ಮಾಸದ ನಿಮಿತ್ತ ಜಿಲ್ಲೆಯ ದೇವಸ್ಥಾನಗಳು, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಮತ್ತು ಕಚೇರಿಗಳಲ್ಲಿ ದತ್ತು ಕುರಿತು ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಪ್ರಚಾರ ಮಾಡಲಾಯಿತು. ಅಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ರ‍್ಯಾಲಿ, ವಾಕಥಾನ್ ಮೂಲಕವೂ ಕಾನೂನು ಬದ್ಧ ದತ್ತು ಕುರಿತು ಹೆಚ್ಚಿನ ಪ್ರಚಾರ ನಡೆಸಲಾಯಿತು. ಗ್ರಾಮ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ವಾಹನದಲ್ಲಿ ಆಡಿಯೋ ಜಿಂಗಲ್ಸ್ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಕಾನೂನುಬದ್ಧವಾಗಿ ದತ್ತು ಪಡೆಯಲು ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸಲಾಯಿತು.

​ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಗಮನಿಸಿದ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ನೀಡಿ ಗೌರವಿಸಿತು. ಕಾರ್ಯಕ್ರಮದಲ್ಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಭಾವನಾ ಸೆಕ್ಸೆನಾ, ಬೆಂಗಳೂರಿನ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಅಶೋಕ ಡಿ. ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಹಲೀಮಾ ಕೆ. ಅವರು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

​ಇದೇ ಸಂದರ್ಭದಲ್ಲಿ, ಅಮೂಲ್ಯ(ಜಿ) ಶಿಶುಗೃಹ ಹುಬ್ಬಳ್ಳಿ ಸಂಸ್ಥೆಯಲ್ಲಿ ಮಕ್ಕಳ ಆರೈಕೆಯಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಪುಷ್ಪಾ ಉಳ್ಳಿಕಾಶಿ ಆಯಾ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಪಡೆದ ಹುಬ್ಬಳ್ಳಿ ಘಂಟಿಕೇರಿ ಸಂಸ್ಥೆಯ ಸರ್ಕಾರಿ ಬಾಲಮಂದಿರದ ಬಾಲಕಿ ವೀಣಾ ಬಡಿಗೇರಿ ಅವರನ್ನು ಗೌರವಿಸಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *