
ಬೆಂಗಳೂರ:ಮೆಕ್ಕೆಜೋಳ ಖರೀದಿ ಮತ್ತು ಎಥೆನಾಲ್ ನಿರ್ವಹಣೆಗೆ ಸಂಬಂಧಿಸಿದಂತೆ (ಶುಕ್ರವಾರ) ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಡಿಸ್ಟಿಲರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೂಡಲೇ ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ ಯಾವ ಡಿಸ್ಟಿಲರಿಗಳು ಎಷ್ಟು ಮೆಕ್ಕೆಜೋಳ ಖರೀದಿಸಬೇಕು ಎಂಬ ಬಗ್ಗೆ ಕೃಷಿ ಮಾರುಕಟ್ಟೆ ಇಲಾಖೆ ಈಗಾಗಲೇ ನಿರ್ದೇಶನಗಳನ್ನು ನೀಡಿದೆ. ಇದರ ಪ್ರಕಾರ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು. ಕೇಂದ್ರ ಸರ್ಕಾರವು ಎಲ್ಲಾ ಧಾನ್ಯ ಆಧಾರಿತ ಡಿಸ್ಟಿಲರಿಗಳು ನಾಫೆಡ್/ಎನ್ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಹೊರಡಿಸಿದ್ದು, ಇದರ ಪ್ರಕಾರ ಎಲ್ಲಾ ಡಿಸ್ಟಿಲರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.
💰 ಕನಿಷ್ಠ ಬೆಂಬಲ ಬೆಲೆಗೆ ನೇರ ಖರೀದಿ
ಮೆಕ್ಕೆಜೋಳದ ನಾಫೆಡ್ ಪೂರ್ವ ನಿರ್ಧಾರಿತ ಖರೀದಿ ಬೆಲೆ ಕ್ವಿಂಟಾಲ್ಗೆ ₹2,639 ಇದ್ದು, ಇದರಲ್ಲಿ ಪ್ರತಿ ಕ್ವಿಂಟಾಲ್ಗೆ ₹2,400 ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರಿಗೆ ನೇರವಾಗಿ ಪಾವತಿಯಾಗಲಿದೆ. ಈ ಹಿನ್ನೆಲೆಯಲ್ಲಿ, ಡಿಸ್ಟಿಲರಿಗಳು ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ದರ ನೀಡಿ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದರೆ, ಜಿಲ್ಲಾಡಳಿತದ ಮೂಲಕ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಎಥೆನಾಲ್ ಕೋಟಾ ನಿಗದಿ ಮತ್ತು ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರವಾದರೂ, ಮೆಕ್ಕೆಜೋಳ ಬೆಳೆಗಾರರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
🌾 ರಾಜ್ಯದಲ್ಲಿ ಮೆಕ್ಕೆಜೋಳದ ಅವಶ್ಯಕತೆ ವಿವರ
ರಾಜ್ಯದಲ್ಲಿ ಧಾನ್ಯ ಮಾತ್ರ ಆಧಾರಿತ ಮೂರು ಡಿಸ್ಟಿಲರಿಗಳಿಗೆ ಒಟ್ಟು 94,400 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, ಇವುಗಳಿಗೆ 2,48,461 ಮೆಟ್ರಿಕ್ ಟನ್ ಮೆಕ್ಕೆಜೋಳದ ಅವಶ್ಯಕತೆ ಇದೆ. ಹಾಗೆಯೇ, 7 ಡ್ಯುಯಲ್ ಫೀಡ್ಸ್ಟಾಕ್ ಡಿಸ್ಟಿಲರಿಗಳಿಗೆ 1,90,751 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, ಇವುಗಳಿಗೆ 5,02,056 ಮೆಟ್ರಿಕ್ ಟನ್ ಮೆಕ್ಕೆಜೋಳದ ಅವಶ್ಯಕತೆಯಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ನಿಯಮಾನುಸಾರವಾಗಿ ಡಿಸ್ಟಿಲರಿಗಳು ರೈತರಿಂದ ಮೆಕ್ಕೆಜೋಳ ಖರೀದಿಸಿ, ರೈತರ ಹಿತ ಕಾಯುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಸಿಎಂ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ, ಈಗಾಗಲೇ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯದ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಹಾಗೂ ಡಿಸ್ಟಿಲರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

