
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಮತ್ತೊಮ್ಮೆ ಗಂಭೀರ ಭದ್ರತಾ ಲೋಪದ ಆರೋಪದ ಸುಳಿಯಲ್ಲಿ ಸಿಲುಕಿದ್ದು, ಸಜಾ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳು ಇರಿಸಲಾದ ಬ್ಯಾರಕ್‌ಗಳಲ್ಲಿಯೇ ಕಳ್ಳಬಟ್ಟಿ ಮಾದರಿಯ ನಶೆ ಏರಿಸುವ ಮದ್ಯವನ್ನು ತಯಾರಿಸುತ್ತಿದ್ದರೆಂಬ ಆತಂಕಕಾರಿ ಸಂಶಯ ವ್ಯಕ್ತವಾಗಿದೆ. ಜೈಲಿನೊಳಗಿನ ಕೊಳೆತ ಹಣ್ಣುಗಳ ಭಾರೀ ದಾಸ್ತಾನಿನ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜೈಲಿನ ಭದ್ರತಾ ವ್ಯವಸ್ಥೆಯು ಸಂಪೂರ್ಣ ಕುಸಿದಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಬ್ಯಾರಕ್‌ವೊಂದರಲ್ಲಿ ಕೊಳೆತ ದ್ರಾಕ್ಷಿ, ಸೇಬು, ಗೋಧಿ, ಸಕ್ಕರೆ ಹಾಗೂ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ಹಣ್ಣುಗಳನ್ನು ಸುಮಾರು 28 ದಿನಗಳ ಕಾಲ ಕೊಳೆಸಿ, ಹುದುಗುವಿಕೆ ಪ್ರಕ್ರಿಯೆಗೆ ಒಳಪಡಿಸಿ, ಅಮಲು ಬರುವ ಉತ್ಪನ್ನವನ್ನು ತಯಾರಿಸಿ, ನಂತರ ಅದಕ್ಕೆ ಅಮಲು ಪದಾರ್ಥಗಳನ್ನು ಸೇರಿಸಿ ಮದ್ಯದಂತೆ ಬಾಟಲಿಗಳಲ್ಲಿ ಶೇಖರಿಸಿ ಇರಿಸಿಕೊಂಡಿರುವ ದೃಶ್ಯಗಳೂ ವಿಡಿಯೋದಲ್ಲಿವೆ. ಹೊಸ ವರ್ಷಾಚರಣೆ ಅಥವಾ ಕೈದಿಗಳ ಜನ್ಮದಿನಾಚರಣೆಗಳ ಸಂದರ್ಭದಲ್ಲಿ ಈ ರೀತಿ ಮದ್ಯ ತಯಾರಿಕೆ ಮಾಡಿಕೊಳ್ಳುತ್ತಿದ್ದರು ಎಂದು ಮೂಲಗಳು ಹೇಳಿವೆ. ಈ ಅಕ್ರಮ ಕೃತ್ಯವು ಪೊಲೀಸ್ ದಾಳಿ ವೇಳೆ ಬಯಲಾಗಿದೆ.
ಉಗ್ರರು, ಪಾತಕಿಗಳ ಬ್ಯಾರಕ್‌ನಲ್ಲಿ ಅಕ್ರಮಗಳ ದರ್ಬಾರ್
ಈಗಾಗಲೇ ಅತ್ಯಾಚಾರ ಮತ್ತು ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಐಎಸ್ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ ಚಿನ್ನ ಕಳ್ಳಸಾಗಣೆ ಆರೋಪಿ ತರುಣ್ ರಾಜ್ ಅವರ ಬ್ಯಾರಕ್‌ಗಳಲ್ಲಿ ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆ ದೃಶ್ಯಗಳು ವೈರಲ್ ಆಗಿದ್ದವು. ಮಾಂಸ, ಮದ್ಯ ಸೇವಿಸಿ ಕೈದಿಗಳು ನೃತ್ಯ ಮಾಡುವ ವಿಡಿಯೋ ಕೂಡ ಹರಿದಾಡಿತ್ತು. ಇಂತಹ ಘಟನೆಗಳ ಸರಣಿಯ ಬೆನ್ನಲ್ಲೇ ಈ ಕಳ್ಳಬಟ್ಟಿ ತಯಾರಿಕೆ ಸಂಶಯದ ವಿಡಿಯೋ ಬಹಿರಂಗಗೊಂಡಿರುವುದು, ಜೈಲಿನೊಳಗೆ ಸಂಘಟಿತ ಅಕ್ರಮ ಜಾಲ ಸಕ್ರಿಯವಾಗಿದೆ ಎಂಬ ಅನುಮಾನಕ್ಕೆ ಪುಷ್ಠಿ ನೀಡಿದೆ.
ಶಾಮೀಲು ಮತ್ತು ಬೆದರಿಕೆಯ ತಂತ್ರ!
ಈ ಕೃತ್ಯದಲ್ಲಿ ನೇರವಾಗಿ ಕಳ್ಳಬಟ್ಟಿ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಆರೋಪಿಗಳನ್ನು ಬಳಸಿಕೊಂಡು ನಶೆ ಏರಿಸುವ ಪದಾರ್ಥವನ್ನು ತಯಾರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಆದರೆ, ಇಷ್ಟೊಂದು ಪ್ರಮಾಣದ ಕೊಳೆತ ಹಣ್ಣುಗಳು, ಸಕ್ಕರೆ ಮತ್ತು ಯೀಸ್ಟ್ ಪೂರೈಕೆ ಜೈಲಿನೊಳಗೆ ಹೇಗೆ ಆಯಿತು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ‘ಒಂದು ತಂಡ ಕೊಳೆತ ಹಣ್ಣುಗಳನ್ನು ತರುತ್ತಿತ್ತು ಮತ್ತು ಮತ್ತೊಂದು ತಂಡ ಮದ್ಯ ತಯಾರಿಸುತ್ತಿತ್ತು’ ಎಂದು ಮೂಲಗಳು ತಿಳಿಸಿವೆ. ಈ ಹಣ್ಣುಗಳನ್ನು ಮತ್ತು ಅಮಲು ಪದಾರ್ಥಗಳನ್ನು ಜೈಲಿನೊಳಗೆ ಯಾರು ತಂದುಕೊಡುತ್ತಿದ್ದರು ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಇದು ಜೈಲು ಸಿಬ್ಬಂದಿಯ ಶಾಮೀಲು ಇಲ್ಲದೆ ಸಾಧ್ಯವೇ ಇಲ್ಲ ಎಂಬ ಅನುಮಾನ ಬಲವಾಗಿದೆ.
ಇದಲ್ಲದೆ, ಮದ್ಯ ಕುಡಿದು ನೃತ್ಯ ಮಾಡುವ ಹಾಗೂ ಮದ್ಯ ತಯಾರಿಸುವ ದೃಶ್ಯಗಳನ್ನು ಕೈದಿಗಳೇ ಚಿತ್ರೀಕರಿಸಿ ಹೊರಗಿರುವ ತಮ್ಮ ಸಹಚರರಿಗೆ ಕಳುಹಿಸಿದ್ದರು. ಬ್ಯಾರಕ್‌ನಲ್ಲಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಸುವುದಾಗಿ ಕೈದಿಗಳು ಜೈಲು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂಬ ಸ್ಫೋಟಕ ಮಾಹಿತಿಯೂ ಹೊರಬಿದ್ದಿದೆ. ಈ ಎಲ್ಲಾ ಅಕ್ರಮಗಳ ಕುರಿತು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ರಚಿಸಲಾದ ಉನ್ನತಮಟ್ಟದ ಸಮಿತಿ ತನಿಖೆ ಆರಂಭಿಸಿದೆ. ಆದರೆ, ಜೈಲಿನೊಳಗೆ ಈ ಮಟ್ಟಿಗೆ ಅಕ್ರಮಗಳ ದರ್ಬಾರ್ ನಡೆಯಲು ಕಾರಣ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

