ರೈತರಿಗೆ ಬಿಗ್ ರಿಲೀಫ್: ಪರಿಹಾರ ಮೊತ್ತವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಡಿ – ಬ್ಯಾಂಕ್‌ಗಳಿಗೆ ಡಿಸಿ ದಿವ್ಯ ಪ್ರಭು ಖಡಕ್ ಸೂಚನೆ

Spread the love

ಧಾರವಾಡ: ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ಹಾನಿಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ರೈತರ ಖಾತೆಗಳಿಗೆ ಜಮೆಯಾಗುವ ಪರಿಹಾರದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಧಾರವಾಡ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

​ಅತೀವೃಷ್ಟಿ, ಪ್ರವಾಹ, ಬರ ಪರಿಸ್ಥಿತಿ ಮತ್ತು ಆಲಿಕಲ್ಲು ಮಳೆಯಂತಹ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿ ಅನುಭವಿಸಿದ ಅರ್ಹ ರೈತ ಫಲಾನುಭವಿಗಳಿಗೆ ನಿಯಮಾನುಸಾರ ಬರ ಪರಿಹಾರದ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಸರ್ಕಾರವು ಜಮೆ ಮಾಡುತ್ತಿದೆ. ಆದರೆ, ಕೆಲವು ಬ್ಯಾಂಕ್ ಅಧಿಕಾರಿಗಳು ಈ ಪರಿಹಾರ ಮೊತ್ತವನ್ನು ರೈತರ ಅಸ್ತಿತ್ವದಲ್ಲಿರುವ ಸಾಲದ ರೂಪದಲ್ಲಿ ಕಡಿತಗೊಳಿಸುತ್ತಿದ್ದಾರೆ ಎಂದು ರೈತರು ಮತ್ತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

​ಪ್ರಕಟಣೆಯಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ಈ ಪರಿಹಾರದ ಮೊತ್ತವು ಬರ, ಅತೀವೃಷ್ಟಿ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಕ್ಕೆ ನೀಡುವ ಪರಿಹಾರವಾಗಿದೆ. ಆದ್ದರಿಂದ, ಈ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಜಿಲ್ಲೆಯಲ್ಲಿನ ಎಲ್ಲ ಬ್ಯಾಂಕುಗಳ ಮುಖ್ಯಸ್ಥರು, ವ್ಯವಸ್ಥಾಪಕರು ಮತ್ತು ಶಾಖಾ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ.

​ರೈತರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಪರಿಹಾರ ಮೊತ್ತವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೂ ಜಿಲ್ಲಾಧಿಕಾರಿಗಳು ಈ ಮೂಲಕ ಸೂಚಿಸಿದ್ದಾರೆ. ಈ ನಿರ್ದೇಶನವು ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೇರವಾಗಿ ಪರಿಹಾರದ ಹಣ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ.

Leave a Reply

Your email address will not be published. Required fields are marked *