
ಹುಲಕೋಟಿಯಲ್ಲಿ ‘ಕನ್ನಡ ಕನ್ನಡಿಗ ಕರ್ನಾಟಕ’ ಉಪನ್ಯಾಸ ಕಾರ್ಯಕ್ರಮ
ಗದಗ,: ವಿದ್ಯಾರ್ಥಿಗಳಿಗೆ ನಮ್ಮ ಕನ್ನಡದ ಕವಿಗಳೇ ಆದರ್ಶವಾಗಬೇಕು. ಡಿ. ಎಸ್. ಕರ್ಕಿ, ಹುಯಿಲಗೋಳ ನಾರಾಯಣರಾವ, ಸಿದ್ದಯ್ಯ ಪುರಾಣಿಕ, ಕುವೆಂಪು ಮತ್ತು ಚೆನ್ನವೀರ ಕಣವಿಯಂತಹ ಮಹಾನ್ ಕವಿಗಳು ಸ್ವತಃ ಕನ್ನಡಾಭಿಮಾನದ ಹಾಡುಗಳನ್ನು ರಚಿಸಿ ಹಾಡುವುದರ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಹೇಳಿದರು.
ಶನಿವಾರದಂದು ಗದಗ ಜಿಲ್ಲೆಯ ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕವಿವ ಸಂಘವು ಆಯೋಜಿಸಿದ್ದ “ಕನ್ನಡ ಕನ್ನಡಿಗ ಕರ್ನಾಟಕ” ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕ್ಕರಿ ಬಾಳಾಚಾರ್ಯರು ಧಾರವಾಡದಲ್ಲಿ ಜರುಗಿದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಳ್ಳುವ ಸಂದರ್ಭ ಬಂದಾಗ, ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ‘ಕನ್ನಡದ ದಾಸಯ್ಯ ಬಂದಿದ್ದಾನೆ’ ಎಂದು ಜೋಳಿಗೆ ಹಾಕಿ ಹಣ ಸಂಗ್ರಹಿಸಿದ್ದನ್ನು ಹಲಗತ್ತಿ ಸ್ಮರಿಸಿದರು. ಕವಿವ ಸಂಘವು 136 ವರ್ಷಗಳಿಂದ ಒಡೆದ ಕನ್ನಡಿಗರ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಕನ್ನಡ ಭಾಷೆ ಆಪತ್ತಿನಲ್ಲಿದ್ದು, ಯುವಕರು ಸಂಘಟನೆ ಮೂಲಕ ಕನ್ನಡ ಕಟ್ಟಲು ಹೋರಾಡಬೇಕು. ವಿದ್ಯಾರ್ಥಿಗಳು ಹುಸಿ ಭರವಸೆಗಳಿಗೆ ಒಳಗಾಗದೆ, ತಮ್ಮ ಶಕ್ತಿ ಸಾಮರ್ಥ್ಯವನ್ನು ನವ ಸಮಾಜ ನಿರ್ಮಾಣಕ್ಕೆ ತೊಡಗಿಸಬೇಕು. ಸಮಾಜ ಬದಲಿಸುವ ದೊಡ್ಡ ಶಕ್ತಿ ನಿಮ್ಮಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಭಾಷಾಭಿಮಾನದ ಮಹತ್ವ:
ಅತಿಥಿಗಳಾಗಿ ಮಾತನಾಡಿದ ಡಾ. ಅರ್ಜುನ್ ಗೊಳಸಂಗಿ ಅವರು, ನೆರೆಯ ತಮಿಳ ಮತ್ತು ತೆಲುಗರಿಗಿರುವಷ್ಟು ಭಾಷಾಭಿಮಾನ ನಮ್ಮಲ್ಲಿಲ್ಲ. ಕನ್ನಡ ಕೇವಲ ಒಂದು ಭಾಷೆ ಮಾತ್ರವಲ್ಲ, ಅದು ನಾಡು, ನಮ್ಮ ಜೀವನ ವಿಧಾನ. ಭಾಷೆಯ ಬಗ್ಗೆ ಅನ್ಯತಾ ದ್ವೇಷ ಬೇಡ. ಕನ್ನಡದಲ್ಲಿ ಮಾತಾಡಿ, ಬರೆದು ವ್ಯವಹರಿಸಿ ಕನ್ನಡ ಭಾಷಾಭಿಮಾನ ಹೊಂದಬೇಕೇ ವಿನಹ ದುರಭಿಮಾನಿಗಳಾಗಬಾರದು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಂ. ಕುರಿ ಅವರು ಉಪನ್ಯಾಸ ನೀಡಿ, ಕವಿವ ಸಂಘಕ್ಕೆ 136 ವರ್ಷಗಳ ಇತಿಹಾಸವಿದ್ದು, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು 53 ವರ್ಷ ಸುದೀರ್ಘವಾಗಿ ಸಂಘವನ್ನು ಮುನ್ನಡೆಸಿದರು. ದಖನ್ ಪ್ರಸ್ಥಭೂಮಿಯ ಆಯಕಟ್ಟಿನ ಸ್ಥಳದಲ್ಲಿರುವ ಕನ್ನಡ ನಾಡಿನಷ್ಟು ಸಮೃದ್ಧ ಮತ್ತು ಶ್ರೀಮಂತ ರಾಜ್ಯ ಬೇರೆ ಇಲ್ಲ. ಕನ್ನಡಿಗರಾದ ನಾವು ಕನ್ನಡ ಕಟ್ಟುವ ಕಾರ್ಯದಲ್ಲಿ ಶಕ್ತಿಯುತವಾಗಿ ಮತ್ತು ಸತ್ವಶಾಲಿಗಳಾಗಿ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಸುಧಾ ಕೌಜಗೇರಿ ಅವರು ವಹಿಸಿದ್ದರು. ಡಾ. ಮಹಾನಂದ ಹಿರೇಮಠ ಸ್ವಾಗತಿಸಿದರು. ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಸಿ ನಿರೂಪಿಸಿದರು, ಡಾ. ಮಂಜುನಾಥ್ ತ್ಯಾಲಗಡಿ ವಂದಿಸಿದರು. ಡಾ. ರಮೇಶ ಹುಲಕುಂದ ಕಾರ್ಯಕ್ರಮ ಸಂಯೋಜಿಸಿದ್ದರು. ಈ ಸಂದರ್ಭದಲ್ಲಿ ಡಾ. ಲಕ್ಷ್ಮಣ ಮುಳುಗುಂದ, ಡಾ. ಅಣ್ಣಪ್ಪ ಹಂಡೆ, ಡಾ. ಉಲ್ಲಾಸ ಶೆಟ್ಟಿ ಇತರ ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊತಬಾಳದ ಶಂಕ್ರಣ್ಣ ಸಂಕಣ್ಣವರ್ ತಂಡದಿಂದ ನಾಡು-ನುಡಿ ಜಾಗೃತಿಯ ಹಾಡುಗಳು ಪ್ರಸ್ತುತವಾದವು

