6ನೇ ಡ್ರೈವ್ ಯಶಸ್ವಿ: ಹುಬ್ಬಳ್ಳಿ-ಧಾರವಾಡದಲ್ಲಿ 129 ಡ್ರಗ್ಸ್ ಬಳಕೆದಾರರ ವಿರುದ್ಧ FIR ದಾಖಲು

Spread the love

ಹುಬ್ಬಳ್ಳಿ-ಧಾರವಾಡ: ಅವಳಿ ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡುವ ಗುರಿಯೊಂದಿಗೆ ಪೊಲೀಸ್ ಇಲಾಖೆಯ ಕಮಿಷನರ್ ಎನ್. ಶಶಿಕುಮಾರ್ ಮತ್ತು ಅವರ ತಂಡವು ಶುಕ್ರವಾರದಂದು (ನ. 21) 6ನೇ ಬಾರಿಗೆ ಬೃಹತ್ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ವಿಶೇಷ ಕಾರ್ಯಾಚರಣೆ ಕೈಗೊಂಡು 334ಕ್ಕೂ ಹೆಚ್ಚು ಶಂಕಿತ ಡ್ರಗ್ಸ್ ಬಳಕೆದಾರರನ್ನು ವಶಕ್ಕೆ ಪಡೆಯಲಾಯಿತು.

​ಈ ಶಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆ ಮತ್ತು ಧಾರವಾಡದ ಡಿಮ್ಹಾನ್ಸ್ (DHARWAD DIMHANS) ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ 129 ಜನ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಇವರ ವಿರುದ್ಧ 24 ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಮಿಷನರ್ ಎನ್. ಶಶಿಕುಮಾರ್ ಅವರ ತಂಡ ಮಾಹಿತಿ ನೀಡಿದೆ.

​ಕಾನೂನು ಕ್ರಮದ ಬಳಿಕ, ಡ್ರಗ್ಸ್ ಸೇವನೆ ದೃಢಪಟ್ಟವರನ್ನು ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು. ಅಲ್ಲಿ ತಜ್ಞರಿಂದ ಡ್ರಗ್ಸ್ ಬಳಕೆದಾರರಿಗೆ ಕೌನ್ಸೆಲಿಂಗ್ (ಸಮಾಲೋಚನೆ) ನಡೆಸಲಾಯಿತು. ಅಲ್ಲದೆ, ಅವರ ಪೋಷಕರಿಗೆ ಮಕ್ಕಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕಾಳಜಿ ಮತ್ತು ಪುನರ್ವಸತಿ ಕುರಿತು ಓರಿಯಂಟೇಷನ್ ಕಾರ್ಯಕ್ರಮವನ್ನು ಸಹ ಆಯೋಜಿಸಲಾಯಿತು.

​ಇದುವರೆಗೂ ಒಟ್ಟು 6 ಬಾರಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಒಟ್ಟು 2,800ಕ್ಕೂ ಹೆಚ್ಚು ಶಂಕಿತ ಡ್ರಗ್ಸ್ ಬಳಕೆದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ಪಾಸಿಟಿವ್ ಬಂದ 1,270ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರ ಮೇಲೆ 245 ಎಫ್‌ಐಆರ್‌ಗಳು ದಾಖಲಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್. ಶಶಿಕುಮಾರ್ ಮತ್ತು ತಂಡ ತಿಳಿಸಿದೆ. ಅವಳಿ ನಗರವನ್ನು ಸಂಪೂರ್ಣವಾಗಿ ನಶೆ ಮುಕ್ತಗೊಳಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ.

Leave a Reply

Your email address will not be published. Required fields are marked *