7 ಕೋಟಿ ದರೋಡೆ ಕೇಸ್‌ಕ್ಕೆ ಪೊಲೀಸಪ್ಪನೇ ಮಾಸ್ಟರ್‌ಮೈಂಡ್: ಗೋವಿಂದಪುರ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ ಬಂಧನ ಸಾಧ್ಯತೆ

Spread the love

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದ್ದ 7 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಗಲು ದರೋಡೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ದರೋಡೆಯ ಹಿಂದಿನ ಮಾಸ್ಟರ್‌ಮೈಂಡ್ ಪೊಲೀಸ್ ಸಿಬ್ಬಂದಿಯೇ ಎಂಬ ಸಂಗತಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ ಅವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಅಣ್ಣಪ್ಪ ನಾಯ್ಕ ಅವರೇ ದರೋಡೆಯ ಸಂಚು ರೂಪಿಸಿ, ಕಮ್ಮನಹಳ್ಳಿ–ಕಲ್ಯಾಣನಗರ ಪ್ರದೇಶದ ಯುವಕರನ್ನು ಸೇರಿಸಿ ತಂಡ ಸಿದ್ಧಗೊಳಿಸಿದ್ದರು. ದರೋಡೆ ಹೇಗೆ ಮಾಡಬೇಕು, ಸ್ಥಳದಿಂದ ಹೇಗೆ ತಪ್ಪಿಸಿಕೊಳ್ಳಬೇಕು, ಪೊಲೀಸರ ನಾಕಾಬಂದಿ ಮತ್ತು ಕಾರ್ಯವೈಖರಿಯಿಂದ ಹೇಗೆ ಪಾರಾಗಬೇಕು ಎಂಬುದರ ವಿವರವಾದ ಮಾರ್ಗದರ್ಶನವನ್ನು ಆರೋಪಿಗಳಿಗೆ ನೀಡಿದ್ದರು ಎನ್ನಲಾಗಿದೆ.

ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ವಾಹನವು ಎಟಿಎಂಗಳಿಗೆ ಹಣ ತುಂಬಲು ತೆರಳುತ್ತಿದ್ದಾಗ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ತಡೆದು ದರೋಡೆ ನಡೆಸಲಾಗಿತ್ತು. ಈ ಕೃತ್ಯದಲ್ಲಿ ಸಂಸ್ಥೆಯ ಕೆಲ ಮಾಜಿ ಉದ್ಯೋಗಿಗಳೂ ಭಾಗಿಯಾಗಿರುವುದು ಪತ್ತೆಯಾಗಿದೆ. ದರೋಡೆಗೊಳಗಾದ 7.11 ಕೋಟಿ ರೂ. ಹಣವನ್ನು ಆರೋಪಿಗಳು ಬೆಂಗಳೂರಿನಲ್ಲೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗೃಹ ಸಚಿವರ ನಿರ್ದೇಶನದ ನಂತರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಇನ್ನೋವಾ ಕಾರನ್ನು ಆಂಧ್ರ ಪ್ರದೇಶದ ಚಿತ್ತೂರಿನ ಬಳಿ ಪತ್ತೆ ಮಾಡಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿಯೇ ದರೋಡೆ ಪ್ರಕರಣದಲ್ಲಿ ಶಾಮೀಲಾಗಿರುವುದು ಇಲಾಖೆಗೆ ಭಾರೀ ಮುಜುಗರ ತಂದಿದೆ.

‘ಬೇಲಿಯೇ ಎದ್ದು ಹೊಲ ಮೇಯ್ದ’ಂತಿರುವ ಈ ಪ್ರಕರಣದಲ್ಲಿ ಅಣ್ಣಪ್ಪ ನಾಯ್ಕನ ಪಾತ್ರದ ಪ್ರಮಾಣ, ಉಳಿದ ಆರೋಪಿಗಳ ಪತ್ತೆ ಮತ್ತು ದರೋಡೆ ಹಣದ ಸುಳಿವು ಕುರಿತು ಮುಂದಿನ ತನಿಖೆ ಸ್ಪಷ್ಟತೆ ನೀಡಲಿದೆ.

Leave a Reply

Your email address will not be published. Required fields are marked *