ಯುವನಿಧಿ ಯೋಜನೆಯ ಸದುಪಯೋಗ ಪಡೆಯಲು ಕರೆ: ಎಂ.ಎಂ. ಕುದುರಗೊಂಡ

Spread the love

ನವಲಗುಂದ: ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಯುವನಿಧಿ’ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು. ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ (ನವಲಗುಂದ), ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರ (ಹುಬ್ಬಳ್ಳಿ) ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ 18 ನವೆಂಬರ್ 2025 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಚಿಲಕವಾಡ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುಳಾ ಕಲ್ಯಾಣಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರದ ಸಹಾಯಕ ನೇಮಕಾತಿ ಅಧಿಕಾರಿಗಳಾದ ಎಂ.ಎಂ. ಕುದುರೆಗೊಂಡ ಅವರು ಕಳೆದ ಎರಡು ವರ್ಷಗಳಲ್ಲಿ ಪದವಿ ಮುಗಿಸಿದ ಯುವಕರನ್ನು ಉದ್ದೇಶಿಸಿ ಮಾತನಾಡಿ, ಯುವನಿಧಿ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಯೋಜನೆಯಿಂದ ಯುವಕರು ಸ್ವಾವಲಂಬಿಗಳಾಗಿ ಉದ್ಯೋಗಾವಕಾಶಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಲಹೆಗಾರ ಹಾಗೂ ತರಬೇತಿದಾರ ನಾಗರಾಜ್ ಬಡಿಗೇರು ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ఈ ಮಹತ್ವದ ಯೋಜನೆಯನ್ನು ಎಲ್ಲರೂ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಬಾಗಡಿ ಅವರು ಅರ್ಜಿ ಸಲ್ಲಿಸುವ ವೇಳೆ ಎದುರಾಗುವ ತಾಂತ್ರಿಕ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರತಿಯೊಬ್ಬ ಅರ್ಹ ಯುವಕರೂ ಯೋಜನೆಯ ನೆರವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ಲೇಸ್‌ಮೆಂಟ್ ಅಧಿಕಾರಿಯಾದ ಗಂಗಾಧರ ಗೌಡರ ಪ್ರಸ್ತಾವಿಕ ಭಾಷಣದಿಂದ ಕಾರ್ಯಕ್ರಮ ಆರಂಭಗೊಂಡಿತು. ಐ.ಕ್ಯೂ.ಎ.ಸಿ ಸಂಚಾಲಕರಾದ ಸಂತೋಷ ಹುಬ್ಬಳ್ಳಿ, ಸಹ ಸಂಚಾಲಕರಾದ ಪ್ರಸನ್ನ ಪಂಡರಿ ಉಪಸ್ಥಿತರಿದ್ದರು. ರವಿ ಬ್ಯಾಹಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಗ್ರಂಥಪಾಲಕ ಶ್ರೀಧರ ಲೋಣಕರ ವಂದಿಸಿದರು.

ಕಾರ್ಯಕ್ರಮದ ವಿಶೇಷತೆ ಎಂದರೆ, ಸ್ಥಳದಲ್ಲಿಯೇ ಅರ್ಹ ಅಭ್ಯರ್ಥಿಗಳ ಯುವನಿಧಿ ನೋಂದಣಿ ಪ್ರಕ್ರಿಯೆ ನೆರವೇರಿಸಲಾಯಿತು.

Leave a Reply

Your email address will not be published. Required fields are marked *