ಮಕ್ಕಳ ಅಹವಾಲು ಆಲಿಕೆ, ಪರಿಹಾರಗಳಿಗೆ ಮಕ್ಕಳ ಗ್ರಾಮಸಭೆ ಮುಖ್ಯ ವೇದಿಕೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

Spread the love

ಧಾರವಾಡ:ಭವಿಷ್ಯತ್ತಿನ ಬೆಳಕಾಗಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯ ಹಾಗೂ ಸೂಕ್ತ ಪರಿಸರ ಸೃಷ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವುದರೊಂದಿಗೆ ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದು ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

​ಅವರು ಮಂಗಳವಾರದಂದು (ನವೆಂಬರ್ 18) ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ, ಗ್ರಾಮ ಪಂಚಾಯತ್‌ನಿಂದ ಸರಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಾದನಭಾವಿ ಗ್ರಾಮ ಪಂಚಾಯತ್ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಅಹವಾಲುಗಳನ್ನು ಆಲಿಸಲು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮಕ್ಕಳ ಗ್ರಾಮಸಭೆಗಳು ಒಂದು ಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ನುಡಿದರು.

​ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅವರ ಭವಿಷ್ಯ ಕೇವಲ ಶಾಲೆಯ ಹೊಣೆಯಲ್ಲ. ಇದು ನಮ್ಮ ಇಡೀ ಸಮುದಾಯದ ಸಂಯುಕ್ತ ಜವಾಬ್ದಾರಿಯಾಗಿದೆ. ಮಕ್ಕಳ ಆರೋಗ್ಯವನ್ನು ಬೆಳೆಸುವುದು ಸೇರಿದಂತೆ ಅವರ ಭವಿಷ್ಯಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳಲ್ಲಿ ಸಮುದಾಯವು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ ಪಂ‌ ಸಿಇಒ ಭುವನೇಶ್ವರ ಪಾಟೀಲ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *