
ಕುಂದಗೋಳ: ಕಲ್ಯಾಣಪುರ ಬಸವಣ್ಣಜ್ಜನವರ ಕಲ್ಯಾಣ ಮಂಟಪದಲ್ಲಿ ತಾಲೂಕು 6ನೇ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ನವೆಂಬರ್ 15ರಂದು ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಗಾಳಿ ಮರೆಮ್ಮ ದೇವಾಲಯದಿಂದ ಆರಂಭವಾಗುವ ಭುವನೇಶ್ವರಿದೇವಿಯ ಭಾವಚಿತ್ರ ಮೆರವಣಿಗೆಗೆ ಮಾಜಿ ಶಾಸಕ ಹಾಗೂ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಅಕ್ಕಿ ಚಾಲನೆ ನೀಡಲಿದ್ದಾರೆ ಎಂದು ತಾಲೂಕು ಕಚುಸಾಪ ಅಧ್ಯಕ್ಷ ವೈ.ಡಿ. ಹೊಸೂರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಕನ್ನಡ ತೇರಿನ ಮೆರವಣಿಗೆಯು ಕಲ್ಯಾಣ ಮಂಟಪಕ್ಕೆ ಆಗಮಿಸಿದ ಬಳಿಕ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಕುಂದಗೋಳ ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಶ್ರೀ, ಅಭಿನವ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಶಿವಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ, ಗಾಂಧಿ ಹಿಂದೀ ವಿದ್ಯಾಪೀಠ ಸಂಸ್ಥಾಪಕ ಫಕ್ಕೀರಯ್ಯ ಬಾಳಿಹಳ್ಳಿಮಠ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಶಾಸಕ ಎಂ.ಆರ್. ಪಾಟೀಲ ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿ ಕ.ಚು.ಸಾ.ಪ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದು, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅವರು “ಸಂಕೀರ್ಣ” ಚುಟುಕು ಸಂಕಲನ ಬಿಡುಗಡೆ ಮಾಡುವರು ಎಂದು ತಿಳಿಸಿದ್ದಾರೆ.
ತಾಲೂಕು ಕಚುಸಾಪ ಪ್ರಧಾನ ಕಾರ್ಯದರ್ಶಿ ಬಸವರಾಜ ಗುಡ್ಡದಕೇರಿ ಅವರು ಮಾತನಾಡಿ, ಘಟಕದ ಕಚುಸಾಪ ಅಧ್ಯಕ್ಷ ವೈ.ಡಿ. ಹೊಸೂರ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಜಿಲ್ಲಾ ಕಚುಸಾಪ ಅಧ್ಯಕ್ಷ ಶಾಂತಣ್ಣ ಕಡಿವಾಲ, ಚನ್ನಬಸಪ್ಪ ಧಾರವಾಡಶೆಟ್ರ, ರಾಜು ಮಾವರಕರ, ಜಗದೀಶ ಕಮ್ಮಾರ, ಮಹಾದೇವಿ ಮಾಡಲಗೇರಿ, ಸಿಪಿಐ ಸಮೀರ ಮುಲ್ಲಾ, ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ರಮೇಶ ಇಂಗಳಹಳ್ಳಿ, ಡಾ. ಪ್ರಭುಗೌಡ ಸಂಕಾಗೌಡಶ್ಯಾನಿ, ಅಶೋಕ ಘೋರ್ಪಡೆ ಹಾಗೂ ಲೊಕೇಶ ಸರಾವರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಬಿ.ಬಿ. ಹರ್ತಿ ಮತ್ತು ಗಣೇಶ ಏಸುಗಡೆ ಅವರು ಮಾತನಾಡಿ, ಸಮ್ಮೇಳನದಲ್ಲಿ “ಕುಂದಗೋಳ ಸರ್ವ ಸಾಹಿತ್ಯ ಪರಿಷತ್ತುಗಳ ಪರಿಚಯಕಾರ ಶ್ರೀ ಜಿ.ಡಿ. ಘೋರ್ಪಡೆ” ಗೌರವ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು. ಈ ಗೌರವವನ್ನು ಜಿ.ಡಿ. ಘೋರ್ಪಡೆ ಅವರ ಧರ್ಮಪತ್ನಿ ಶಕುಂತಲಾ ಘೋರ್ಪಡೆ, ಹಿರಿಯ ಪತ್ರಕರ್ತ ದಿವಂಗತ ಕಲ್ಲಪ್ಪಜ್ಜ ಹೊಳ್ಳಣ್ಣವರ ಅವರ ಧರ್ಮಪತ್ನಿ ಚನ್ನಮ್ಮ ಹೊಳ್ಳಣ್ಣವರ, ಪ್ರಗತಿಪರ ರೈತ ಗೋವಿಂದಪ್ಪ ತಳವಾರ ಹಾಗೂ ನಾಟಿವೈದ್ಯ-ಪಕ್ಷಿಪ್ರೇಮಿ ಮಹಾದೇವಪ್ಪ ಶಿರಸಂಗಿ (ಗ್ಯಾರಂಟಿ) ಅವರಿಗೆ ನೀಡಲಾಗುತ್ತದೆ.
ಇದಲ್ಲದೆ, ಜಿಲ್ಲಾ ಕಾ.ನಿ.ಪ.ಸಂಘದ ನೂತನ ಅಧ್ಯಕ್ಷ ಹಾಗೂ ಪತ್ರಕರ್ತ ಬಂಡು ಕುಲಕರ್ಣಿ, ಶಿಕ್ಷಕ-ಸಾಹಿತಿ ಎಸ್.ಸಿ. ಶ್ಯಾನವಾಡ, ಕಲಾವಿದ ಶಂಬಯ್ಯ ಹಿರೇಮಠ ಹಾಗೂ ಶತಾಯುಷಿ ಜಾನಪದಗಾರ್ತಿ ರುದ್ರಮ್ಮ ಕರೆಮಲ್ಲಣ್ಣನವರ ಅವರಿಗೆ “ಶ್ರೀ ಜಿ.ಡಿ. ಘೋರ್ಪಡೆ ಸ್ಮಾರಕ ಗೌರವ” ಪ್ರದಾನವಾಗಲಿದೆ. ಜೊತೆಗೆ, ಚುಟುಕು ಸ್ಪರ್ಧೆಯಲ್ಲಿ ಆಯ್ಕೆಯಾದ ಐದು ಕವಿಗಳಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ರಾಘವೇಂದ್ರ ನರ್ತಿ, ಸಹ ಕಾರ್ಯದರ್ಶಿ ಜಗದೇವಯ್ಯ ಹಿರೇಮಠ, ಖಜಾಂಚಿ ಸಂತೋಷ ಬಡಿಗೇರ, ಉಪಖಜಾಂಚಿ ರ್ಯಾವಪ್ಪ ಬಡಿಗೇರ ಹಾಗೂ ಸದಸ್ಯರಾದ ಶಿಕ್ಷಕಿ ಶಾಂತಾ ಹೂಗಾರ, ರುದ್ರಮುನೀಶ್ವರಯ್ಯ ಹಿರೇಮಠ, ವೀರೇಶ ಭಂಡಿವಾಡ, ಮಲ್ಲೇಶ ಜಕ್ಕಮ್ಮನವರ ಮತ್ತು ಗಂಗಾಧರ ಸುತಾರ ಹಾಜರಿದ್ದರು.

