🛑 ಗೋರ ದುರಂತ: ಟಿಪ್ಪರ್–ಬಸ್ ಭೀಕರ ಡಿಕ್ಕಿ; ತೆಲಂಗಾಣದಲ್ಲಿ 20 ಸಾವು

Spread the love


🛑 ಗೋರ ದುರಂತ: ಟಿಪ್ಪರ್–ಬಸ್ ಭೀಕರ ಡಿಕ್ಕಿ; ತೆಲಂಗಾಣದಲ್ಲಿ 20 ಸಾವು

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಮಂದಿ ದುರ್ಮರಣ ಹೊಂದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಹೈದರಾಬಾದ್–ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (RTC) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಘೋರ ದುರಂತ ಸಂಭವಿಸಿದೆ.

ಟಿಪ್ಪರ್ ಮಗುಚಿ ಭಾರಿ ಜೀವಹಾನಿ
ಘಟನೆಯು ವಿಕಾರಾಬಾದ್ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡ ಎಂಬಲ್ಲಿ ನಡೆದಿದೆ. ವರದಿಗಳ ಪ್ರಕಾರ, ಟಿಪ್ಪರ್ ಲಾರಿಯು ನಿಯಂತ್ರಣ ಕಳೆದುಕೊಂಡು ತಂದೂರು ಡಿಪೋಗೆ ಸೇರಿದ ಸರ್ಕಾರಿ ಬಸ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್ ಬಸ್ಸಿನ ಮೇಲೆ ಮಗುಚಿದ್ದು, ಲಾರಿಯಲ್ಲಿದ್ದ ಜಲ್ಲಿಕಲ್ಲುಗಳ ಭಾರೀ ಪ್ರಮಾಣದ ರಾಶಿ ಬಸ್ಸಿನೊಳಗೆ ಕುಳಿತಿದ್ದ ಪ್ರಯಾಣಿಕರ ಮೇಲೆ ಬಿದ್ದಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತಪಟ್ಟ 20 ಮಂದಿಯಲ್ಲಿ, 11 ಮಹಿಳೆಯರು, 9 ಪುರುಷರು ಹಾಗೂ ಒಂದು 1 ವರ್ಷದ ಹೆಣ್ಣು ಮಗು ಸೇರಿದೆ. ಮೃತಪಟ್ಟವರಲ್ಲಿ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕರೂ ಸೇರಿರುವ ಸಾಧ್ಯತೆ ಇದೆ. ಅಪಘಾತದಲ್ಲಿ ಗಾಯಗೊಂಡ 24ಕ್ಕೂ ಹೆಚ್ಚು ಜನರನ್ನು ಸ್ಥಳೀಯರು ಮತ್ತು ಪೊಲೀಸರು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಸಿಎಂ ಸಂತಾಪ, ತನಿಖೆಗೆ ಆದೇಶ
ಈ ದುರಂತಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಗಾಯಾಳುಗಳನ್ನು ತಕ್ಷಣ ಹೈದರಾಬಾದ್‌ಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ. ಜೊತೆಗೆ, ಸಾರಿಗೆ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನ ಅತಿವೇಗದ ಚಾಲನೆ ಮತ್ತು ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


Leave a Reply

Your email address will not be published. Required fields are marked *