
📰 ಕನ್ನಡ ರಾಜ್ಯೋತ್ಸವ ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತ: ಶಾಸಕ ಎನ್.ಹೆಚ್. ಕೋನರಡ್ಡಿ
ನವಲಗುಂದ: ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಾನಂದದಿಂದ ಆಚರಿಸಲಾಗುತ್ತದೆ. 1956ನೇ ಇಸವಿಯಲ್ಲಿ ವಿವಿಧ ಕನ್ನಡ ಭಾಷಾಭಿಮಾನಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಿಸಿ, ಮೈಸೂರು ರಾಜ್ಯವನ್ನು ನಿರ್ಮಿಸಲಾಯಿತು. ನಂತರ 1973ರಲ್ಲಿ ಅದಕ್ಕೆ “ಕರ್ನಾಟಕ” ಎಂದು ನಾಮಕರಣ ಮಾಡಲಾಯಿತು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಅವರು ಶುಕ್ರವಾರ ನವಲಗುಂದ ತಹಶೀಲ್ದಾರ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. “ಕನ್ನಡ ರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಭಾವನೆಗಳ, ಪರಂಪರೆಯ ಮತ್ತು ಇತಿಹಾಸದ ಪ್ರತಿಬಿಂಬವಾಗಿದೆ. ನಾವು ಕನ್ನಡಿಗರು ಎಂದೆಂದಿಗೂ ನಮ್ಮ ಭಾಷೆಯನ್ನು ಗೌರವಿಸಬೇಕು, ಅದನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ತಲುಪಿಸಬೇಕು. ಕನ್ನಡ ಮಾತನಾಡುವುದೇ ಹೆಮ್ಮೆಯ ವಿಷಯ. ‘ಎಲ್ಲಾದರೂ ಇರಲಿ ಕನ್ನಡ ನಾಡು, ಎಲ್ಲೆಡೆ ಬೆಳಗಲಿ ಕನ್ನಡ ಬಾವುಟ’ ಎನ್ನುವ ನುಡಿಗಟ್ಟು ನಮ್ಮ ಹೃದಯದಲ್ಲಿ ಸದಾ ಇರಲಿ,” ಎಂದು ಅವರು ಕರೆ ನೀಡಿದರು.
ರೈತರಿಗೆ ಪರಿಹಾರ ವಿತರಣೆ:
ಇದೇ ಸಂದರ್ಭದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆ ಪರಿಹಾರ ವಿತರಣೆ ಕುರಿತು ಶಾಸಕ ಕೋನರಡ್ಡಿ ಮಾಹಿತಿ ನೀಡಿದರು. “2025–26ನೇ ಸಾಲಿನಲ್ಲಿ ಆಗಸ್ಟ್–2025 ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ ಮತ್ತು ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ನೀಡುವ ಕುರಿತು ಸರ್ಕಾರವು ಧಾರವಾಡ ಜಿಲ್ಲೆಗೆ ಮೊದಲಿಗರಾಗಿ ಪರಿಹಾರ ಬಿಡುಗಡೆ ಮಾಡಿದೆ,” ಎಂದು ಅವರು ಹೇಳಿದರು.
ನವಲಗುಂದ ತಾಲೂಕಿನ 18,433 ರೈತ ಫಲಾನುಭವಿಗಳಿಗೆ ರೂ. 18,74,89,876, ಅಣ್ಣಿಗೇರಿ ತಾಲೂಕಿನ 11,994 ರೈತ ಫಲಾನುಭವಿಗಳಿಗೆ ರೂ. 11,79,64,677, ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ 11,058 ರೈತ ಫಲಾನುಭವಿಗಳಿಗೆ ರೂ. 11,78,05,212 ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದ ಒಟ್ಟು 41,485 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 42,32,59,765 ಮೊತ್ತ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಆಗುತ್ತಿದೆ. ಈ ರೈತಪರ ಕಾರ್ಯಕ್ಕಾಗಿ ಶಾಸಕ ಕೋನರಡ್ಡಿ ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಅಂಬೇಡ್ಕರ ನಗರದಲ್ಲಿ ನೂತನ ಸಮುದಾಯ ಭವನ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಲಗುಂದ ಪುರಸಭೆಯಿಂದ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ ನಗರದ ಡಾ. ಬಾಬು ಜಗಜೀವನರಾಂ ಸಮುದಾಯ ಭವನವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು. ಜೊತೆಗೆ ವಿಕಲಚೇತನರಿಗೆ ಪ್ರಯಾಣಕ್ಕಾಗಿ ನವಲಗುಂದ ತಾಲ್ಲೂಕಿನ ಫಲಾನುಭವಿ ಅನಿಲ ಕಟ್ಟಿಮನಿ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಫಲಾನುಭವಿ ಮಾರುತಿ ಬಾಳೆಹೊಸೂರ ಅವರಿಗೆ ನೂತನ ತ್ರಿಚಕ್ರ ವಾಹನಗಳ ಕೀಲುಗಳನ್ನು ವಿತರಿಸಲಾಯಿತು. “ಮುಂಬರುವ ದಿನಗಳಲ್ಲಿ ಬಾಕಿ ಉಳಿದ ವಿಕಲಚೇತನರಿಗೂ ವಾಹನ ವಿತರಿಸಲಾಗುವುದು,” ಎಂದು ಶಾಸಕರು ತಿಳಿಸಿದರು.
ವಾಲ್ಮೀಕಿ ಭವನ ಉದ್ಘಾಟನೆ:
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ವಾಲ್ಮೀಕಿ ಭವನಗಳನ್ನು ನಿರ್ಮಿಸಿರುವ ಕೀರ್ತಿ ನವಲಗುಂದ ವಿಧಾನಸಭಾ ಕ್ಷೇತ್ರಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಲವಾಡ ಗ್ರಾಮದಲ್ಲಿ ನಿರ್ಮಿಸಲಾದ ವಾಲ್ಮೀಕಿ ಭವನವನ್ನು ಕೂಡ ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೋನರಡ್ಡಿ ಭಾಗವಹಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸುಧೀರ್ ಸಾಹುಕಾರ್, ತಾ.ಪಂ. ಇಒ ಶ್ರೀಮತಿ ಭಾಗ್ಯಶ್ರೀ ಜಹಗೀರದಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಡಾ. ಮನೋಹರ ದ್ಯಾಬೇರಿ, ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಸೇರಿದಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

