ಕನ್ನಡ ನಾಡು-ನುಡಿ ಪ್ರೀತಿ ನವೆಂಬರ್‌ಗೆ ಸೀಮಿತವಾಗಬಾರದು: ಸಚಿವ ಸಂತೋಷ ಲಾಡ್

Spread the love

📰 ಕನ್ನಡ ನಾಡು-ನುಡಿ ಪ್ರೀತಿ ನವೆಂಬರ್‌ಗೆ ಸೀಮಿತವಾಗಬಾರದು: ಸಚಿವ ಸಂತೋಷ ಲಾಡ್

ಧಾರವಾಡ. 01: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಪ್ರೀತಿಯನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿಸದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ “ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ” ಎಂಬ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಕರೆ ನೀಡಿದರು.

ಅವರು ಶನಿವಾರದಂದು ಜಿಲ್ಲಾಡಳಿತವು ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಅವರು ಮುಂದುವರಿಸಿ, ನಮ್ಮ ಧ್ವಜದ ಕೆಂಪು ಮತ್ತು ಹಳದಿ ಬಣ್ಣಗಳು ರಾಜ್ಯದ ಶಕ್ತಿ, ಶೌರ್ಯ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿಬಿಂಬಿಸುತ್ತವೆ ಎಂದರು. ಕನ್ನಡ ಭಾಷೆಯು ಸುಮಾರು 2500 ವರ್ಷಗಳ ಇತಿಹಾಸ ಹೊಂದಿದ್ದು, ಹಲವು ಉಪಭಾಷೆಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣ ಚಳವಳಿಯು ದೇಶದ ಸ್ವಾತಂತ್ರ್ಯ ಹೋರಾಟದಷ್ಟೇ ಮಹತ್ವದ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.

ಧಾರವಾಡ ಜಿಲ್ಲೆ ಕರ್ನಾಟಕ ಏಕೀಕರಣ ಚಳವಳಿಗೆ ತವರೂರಾಗಿದ್ದು, ಆಲೂರ ವೆಂಕಟರಾಯರು, ರಾ.ಹ. ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್ಪ, ಅದರಗುಂಚಿ ಶಂಕರಗೌಡ ಪಾಟೀಲ ಮುಂತಾದ ಪ್ರಮುಖರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಚಿವರು ಅಭಿಪ್ರಾಯಪಟ್ಟರು. ದಾಸ ಸಾಹಿತ್ಯ, ವಚನ ಸಾಹಿತ್ಯ, ಸರ್ವಜ್ಞನ ತ್ರಿಪದಿ ಮತ್ತು ಮಂಕುತಿಮ್ಮನ ಕಗ್ಗಗಳು ಕನ್ನಡಿಗರ ಜ್ಞಾನ, ಭಕ್ತಿ ಮತ್ತು ಕರ್ಮಸಿದ್ಧಾಂತಗಳನ್ನು ಸ್ಪಷ್ಟಪಡಿಸಿದ್ದವೆಂದರು. ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಕುವೆಂಪು, ದ.ರಾ. ಬೇಂದ್ರೆ, ಬಸವಣ್ಣ, ಅಕ್ಕಮಹಾದೇವಿ, ಪಂಪ, ರನ್ನ, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ ಮುಂತಾದ ಗಣ್ಯರನ್ನು ಅವರು ಅಭಿಮಾನದಿಂದ ಸ್ಮರಿಸಿದರು.

ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರವು ಸರ್ವರಿಗೂ ಸಮಪಾಲು, ಸಮಬಾಳು ಆಶಯದೊಂದಿಗೆ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳ ಮೂಲಕ ಜನರಿಗೆ ನೇರ ಪ್ರಯೋಜನ ತಲುಪುತ್ತಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಲಕ್ಷಾಂತರ ಮಹಿಳೆಯರು ಮತ್ತು ಕುಟುಂಬಗಳು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶಿಕ್ಷಣ ತಜ್ಞ ಪ್ರೊ. ರವೀಂದ್ರ ಕೋರಿಶೆಟ್ಟರ ಮತ್ತು ಚಿತ್ರಕಲಾವಿದ ಬಿ. ಮಾರುತಿ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸಿದ ಸಚಿವರು, ಧಾರವಾಡದ ಜನರ ಹೆಮ್ಮೆ ಹೆಚ್ಚಿಸಿರುವ ಈ ಸಾಧಕರನ್ನು ಕೊಂಡಾಡಿದರು.

ಕಾರ್ಯಕ್ರಮದ ವೇಳೆ ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಅಡಚಣೆಯ ಬಗ್ಗೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ, ಈ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.

ಕಾರ್ಯಕ್ರಮದ ನಂತರ ಸಚಿವ ಸಂತೋಷ ಲಾಡ್ ಅವರು ವಿದ್ಯಾರ್ಥಿಗಳಿದ್ದ ಸ್ಥಳಕ್ಕೆ ತೆರಳಿ ರಾಜ್ಯೋತ್ಸವದ ಶುಭಾಶಯ ಕೋರಿದರು. ವಿದ್ಯಾರ್ಥಿಗಳು ಸಚಿವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು. ಪಥಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ, ಅರಣ್ಯ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು. ಪಥಸಂಚಲನ ವಿಜೇತರಲ್ಲಿ ಎನ್. ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಪ್ರಥಮ ಸ್ಥಾನ ಗಳಿಸಿತು.

Leave a Reply

Your email address will not be published. Required fields are marked *