ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಲಾಡ್ ತೀವ್ರ ತರಾಟೆ!ಜಾತಿ-ಆದಾಯ ಪ್ರಮಾಣಪತ್ರ ವಿತರಣೆ ವಿಳಂಬ, ಆಸ್ತಿ ಕಡತಗಳ ಬಾಕಿ ಉಳಿಸಿಕೊಂಡಿದ್ದಕ್ಕೆ ಸಚಿವರು ಗರಂ; ಅಮಾನತಿಗೆ ಸೂಚನೆ

Spread the love

ಕಲಘಟಗಿ: ಜಾತಿ ಹಾಗೂ ಆದಾಯ ಪ್ರಮಾಣಪತ್ರ ವಿತರಣೆಯಲ್ಲಿನ ವಿಳಂಬ ಮತ್ತು ಆಸ್ತಿ ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಂದಾಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಕಲಘಟಗಿಯಲ್ಲಿ ನಡೆದಿದೆ. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕಲಘಟಗಿ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರದಂದು ಜಿಲ್ಲಾಡಳಿತದಿಂದ ಆಯೋಜಿಸಲಾದ 18ನೇ ಜಿಲ್ಲಾಮಟ್ಟದ ಜನಸಂಪರ್ಕ ಸಭೆ (ಜನತಾ ದರ್ಶನ) ಯಲ್ಲಿ ಈ ಘಟನೆ ನಡೆದಿದೆ.

ಸಭೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ತಮಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ, ಸಂಬಂಧಿಸಿದ ಅಧಿಕಾರಿಗಳು ಸಹ ಇರೋದಿಲ್ಲ ಎಂದು ಸಚಿವರ ಮುಂದೆ ಕಣ್ಣೀರು ಹಾಕಿದರು. ಇದರಿಂದ ತೀವ್ರ ಕುಪಿತಗೊಂಡ ಸಚಿವರು, ನಿರ್ಲಕ್ಷ ತೋರಿದ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ವೇದಿಕೆಯಲ್ಲೇ ಸೂಚನೆ ನೀಡಿದರು.

ಇದಲ್ಲದೆ, ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದ ಕಂದಾಯ ನಿರೀಕ್ಷಕರನ್ನು ವೇದಿಕೆ ಮೇಲೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. “ಜನತಾ ದರ್ಶನಕ್ಕೆ ನಾನು ಬಂದಾಗ ಹೂವು ಕೊಟ್ಟು ಸ್ವಾಗತ ಮಾಡುವುದಷ್ಟೇ ನಿಮ್ಮ ಕೆಲಸವಲ್ಲ, ಈ ಕಡತಗಳನ್ನು ಪೂರ್ಣಗೊಳಿಸಬೇಕು. ನಿಮಗೆ ಜನರ ಬಗ್ಗೆ ಕಾಳಜಿಯಿಲ್ಲ, ಇವರನ್ನು ಅಮಾನತು ಮಾಡಿ,” ಎಂದು ಸಚಿವ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಈ 18ನೇ ಜನತಾ ದರ್ಶನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಹಿಂದಿನ 17 ಜನತಾ ದರ್ಶನಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇರುವುದರಿಂದ ಜನರಿಗೆ ಸಾಕಷ್ಟು ಸಹಾಯವಾಗಿದೆ ಎಂದು ಸಚಿವರು ಹೇಳಿದರು.

ಈ ಬಾರಿಯ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಒಟ್ಟು 378 ಅರ್ಜಿಗಳು ಸ್ವೀಕಾರಗೊಂಡಿದ್ದು, ಅವುಗಳಲ್ಲಿ ಕಂದಾಯ ಇಲಾಖೆಗೆ 121, ಗ್ರಾಮೀಣಾಭಿವೃದ್ಧಿ ಇಲಾಖೆಗೆ 68, ವಸತಿ (ಮನೆ) ಇಲಾಖೆಗೆ 60, ನಗರಾಭಿವೃದ್ಧಿ ಇಲಾಖೆಗೆ 26, ಶಿಕ್ಷಣ ಇಲಾಖೆಗೆ 24 ಮತ್ತು ಆರೋಗ್ಯ ಇಲಾಖೆಗೆ 14 ಅರ್ಜಿಗಳು ಬಂದಿವೆ. ಕೆಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು. ಉಳಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಕೆಎಂಸಿಆರ್‌ಐ (ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ) ಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರು ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಚಿವರು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ, ಶಂಕರ ರಾಮು ಲಮಾಣಿ ಎಂಬುವವರು ತಮ್ಮ ಆಸ್ತಿ ಇ-ಸ್ವತ್ತು ಮಾಡಿಸಿಕೊಳ್ಳಲು ಒಂದು ವರ್ಷದಿಂದ ಅಲೆದಾಡುತ್ತಿರುವುದಾಗಿ ಮನವಿ ಸಲ್ಲಿಸಿದರು. ಅಪಾರ ಮಳೆಯಿಂದ ಬೆಳೆ ಹಾನಿಯಾಗಿದ್ದು, ಬೆಳೆ ವಿಮೆ ಪರಿಹಾರ ವಿಳಂಬವಾಗುತ್ತಿದೆ ಎಂದು ಮಿಶ್ರಿಕೋಟಿ ಗ್ರಾಮದ ಬಸವರಾಜ ಬೆಲ್ಲದ ಅವರು ದೂರಿದರು. ಹೈನುಗಾರಿಕೆ ಯೋಜನೆಗೆ ಒಂದು ವರ್ಷವಾದರೂ ಆಯ್ಕೆ ಮಾಡಿಲ್ಲ ಎಂದು ರೇಣುಕಾ ದೇವೇಂದ್ರ ಲಮಾಣಿ ಅವರು ಮನವಿ ಮಾಡಿದರು. ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಕ್ರಮ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *