
ಕುಂದಗೋಳ: ಇಂದಿನ ದಿನಗಳಲ್ಲಿ ನಿಸ್ವಾರ್ಥಭಾವದಿಂದ ಸೇವೆ ಸಲ್ಲಿಸಿ ಸತ್ಕಾರದಲ್ಲಿ ತೊಡಗಿರುವ ವಿದ್ಯಾರ್ಥಿ ಬಳಗ ಅಪರೂಪ. ಅಂತಹ ವಿದ್ಯಾರ್ಥಿಗಳು ತಂದೆ ತಾಯಿ, ಗುರು-ಹಿರಿಯರನ್ನು ಗೌರವಿಸಿ, ಅವರ ಸೇವಾ ಮನೋಭಾವವನ್ನು ಕಂಡು ಗೌರವಿಸಿ ಸತ್ಕರಿಸುತ್ತಿರುವುದು ನಿಜಕ್ಕೂ ಪುಣ್ಯದ ಕಾರ್ಯ ಎಂದು ಸಂಸ್ಥಾನಮಠ ಶಿರಹಟ್ಟಿಯ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಭಾನುವಾರದಂದು ಸಂಶಿ ಗ್ರಾಮದ ಶ್ರೀ ಜ.ಫಕೀರ ಶೀವಜೋಗೀಶ್ವರ ಪ್ರೌಢಶಾಲೆಯಲ್ಲಿ ನಡೆದ 2002-03ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಸಂಶಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹೂಗಳ ಸುರಿಮಳೆಯೊಂದಿಗೆ ಶಿಕ್ಷಕರನ್ನು ಮೆರವಣಿಗೆ ಮೂಲಕ ಸತ್ಕರಿಸಿ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥಾನಮಠ ಶಿರಹಟ್ಟಿಯ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು, ಗುರುಗಳ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಜೆ ಎಫ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಿ.ಸಿ. ಬೊಮ್ಮನಗೌಡ್ರ ಮಾತನಾಡಿ, ಗುರು-ಶಿಷ್ಯರ ಸಂಬಂಧ ಹೇಗಿರಬೇಕೆಂಬುದನ್ನು ಈ ವೇದಿಕೆ ಸಾರಿ ಸಾರಿ ಹೇಳಿದೆ. ಇಂದು 23 ವರ್ಷಗಳ ಬಳಿಕ ವಿದ್ಯಾರ್ಥಿಗಳು ಮಾಡುತ್ತಿರುವ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಇನ್ನೋರ್ವ ಮಾಜಿ ಶಿಕ್ಷಕರೂ ಹಾಗೂ ಹಾಲಿ ಗ್ರಾ ಪಂ ಸದಸ್ಯರೂ ಆದ ಎಚ್.ಎಸ್. ಲಕ್ಷ್ಮೇಶ್ವರ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಒಳ್ಳೆಯ ಗೌರವ, ಸತ್ಕಾರ ನೀಡಬೇಕು. ಗುರುವಿನಿಂದ ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಆರ್. ಕಳ್ಳೀಮನಿ, ಪಿ.ಆರ್. ಜೇಡರ, ವ್ಹಿ.ಎಮ್. ಕರ್ಜಗಿ, ಎನ್.ಎಮ್. ಮಳೇಪ್ಪನವರ, ಡಿ.ಎಸ್. ಭೂಸನಗೌಡ, ಎಚ್.ಎಫ್. ಬೊಮ್ಮನಗೌಡ್ರ, ಎಮ್.ಜಿ. ಹೀರೇಮಠ, ಎಸ್.ಎನ್. ಕಬನೂರ, ಎಸ್.ಬಿ. ತಾಳಿಕೋಟಿಮಠ, ಎಚ್.ಎಸ್. ಲಕ್ಷ್ಮೇಶ್ವರ ಹಾಗೂ 2002-03ನೇ ಸಾಲಿನ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

