
ಧಾರವಾಡ: ತಮ್ಮ ಶಕ್ತಿ-ಸಾಮರ್ಥ್ಯದಿಂದ ಧಾರವಾಡದ ಕೆ.ಸಿ.ಸಿ. ಬ್ಯಾಂಕನ್ನು ಭಾರತದಲ್ಲೇ ಸರ್ವಶ್ರೇಷ್ಠ ಜಿಲ್ಲಾ ಸಹಕಾರಿ ಬ್ಯಾಂಕನ್ನಾಗಿ ಉನ್ನತ ಸ್ಥಾನಕ್ಕೆ ತಂದ ದಿ. ವಿ.ಎಸ್. ಬಸವನಾಳ ಅವರು ಒಬ್ಬ ಶ್ರೇಷ್ಠ ಸಹಕಾರಿ ದಿಗ್ಗಜರಾಗಿದ್ದರು ಎಂದು ಸಹಕಾರಿ ಇಲಾಖಾ ವಿಶ್ರಾಂತ ಅಪರ ನಿಬಂಧಕ ಬಿ.ಎಚ್. ಮಂಜಪ್ಪ ಬಣ್ಣಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ವಿರೂಪಾಕ್ಷಪ್ಪ ಶಿ. ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸಹಕಾರಿ ಸೇವೆಯಲ್ಲಿ ಬಸವನಾಳರ ಪಾತ್ರ’ ಉಪನ್ಯಾಸ ಮತ್ತು ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಸಿಬ್ಬಂದಿಗಳಿಗೆ ‘ಸತ್ಯಶುದ್ಧ ಕಾಯಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡುತ್ತಾ ಮಾತನಾಡಿದರು.
ದಿ. ವಿ.ಎಸ್. ಬಸವನಾಳ ಅವರು ಕೆ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿ ಸುದೀರ್ಘ 40 ವರ್ಷಗಳ ಕಾಲ ಅನುಪಮ ಸೇವೆ ಸಲ್ಲಿಸಿದ್ದರು. ಈಗಿನ ಕೆ.ಸಿ.ಸಿ. ಬ್ಯಾಂಕಿನ ಸುಂದರ ಮತ್ತು ಭವ್ಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದರು. ತಮ್ಮ ಸತ್ಯಶುದ್ಧ ಕಾಯಕ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ತಂದು, ವಿಭಜಿತ ಧಾರವಾಡ ಜಿಲ್ಲೆಯಾದ್ಯಂತ ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದುವಂತೆ ಮಾಡಿದರು ಎಂದು ಮಂಜಪ್ಪ ಸ್ಮರಿಸಿದರು.
ಬಸವನಾಳರು ಕೆ.ಸಿ.ಸಿ. ಬ್ಯಾಂಕಿನ ಜೊತೆಗೆ ಹತ್ತಾರು ಸಹಕಾರಿ ಸಂಸ್ಥೆಗಳಿಗೆ ಸೇವೆ ಸಲ್ಲಿಸಿ ಜನಮಾನಸದಲ್ಲಿ ನೆಲೆಯಾದರು. ಮೈಸೂರು ಜಯಚಾಮರಾಜ ಒಡೆಯರ್, ಇಂದಿರಾ ಗಾಂಧಿ, ಮುರಾರ್ಜಿ ದೇಸಾಯಿಯವರಂತಹ ರಾಜಕೀಯ ಮುತ್ಸದ್ಧಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಬ್ಯಾಂಕು ಸರ್ವಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನೆರವಾಯಿತು. ದಿ. ಪಿ.ಎಲ್. ಪಾಟೀಲರ ಶ್ರಮವನ್ನೂ ಮಂಜಪ್ಪ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕೆ.ಸಿ.ಸಿ. ಬ್ಯಾಂಕಿನ ವಿಶ್ರಾಂತ ಜನರಲ್ ಮ್ಯಾನೇಜರ್ ಎಸ್.ಜಿ. ಪಾಟೀಲ ಅವರು ದತ್ತಿ ದಾನಿಯಾಗಿ ಮಾತನಾಡಿ, ದಿ. ವಿ.ಎಸ್. ಬಸವನಾಳ ತಮ್ಮ ಬದುಕಿನ ಭಾಗ್ಯದ ಬಾಗಿಲು ತೆರೆದು, ತಮ್ಮ ವ್ಯಕ್ತಿತ್ವ ರೂಪಿಸಿದ ಮಹಾನುಭಾವರು. ನಾನು ಬದುಕು ಕಟ್ಟಿಕೊಳ್ಳಲು ಅವರೇ ಕಾರಣಕರ್ತರು ಎಂದು ಸ್ಮರಣೆ ಮಾಡಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿ.ಎಸ್. ಪಾಟೀಲ ಮಾತನಾಡಿ, ದಿ. ಬಸವನಾಳರು ಸರ್ಕಾರಿ ವಕೀಲರಾಗಿದ್ದಾಗ ತಮ್ಮ ಕಕ್ಷಿದಾರನಿಗೊಬ್ಬನಿಗೆ ನ್ಯಾಯ ಒದಗಿಸಿ ಕೊಡಲು ಆಗದೇ ಹೋದಾಗ ವಕೀಲಿ ವೃತ್ತಿಗೇ ರಾಜೀನಾಮೆ ನೀಡಿದ ಪ್ರಸಂಗವನ್ನು ನೆನಪಿಸಿದರು. ಬಸವನಾಳ ಅವರ ಕುಟುಂಬ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ಪ್ರೊ. ಶಿ.ಶಿ. ಬಸವನಾಳ ಅವರು ಕೆ.ಎಲ್.ಇ. ಸಂಸ್ಥೆಯ ಸಪ್ತರ್ಷಿಗಳಲ್ಲೊಬ್ಬರಾಗಿದ್ದರು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ‘ಸತ್ಯಶುದ್ಧ ಕಾಯಕ’ ಪ್ರಶಸ್ತಿ ಪುರಸ್ಕೃತರಾದ ಬಿ.ಆರ್. ಪಾಟೀಲ, ಆರ್.ಎಸ್. ಸಾವಳಗಿಮಠ, ಯು.ಬಿ. ಹೊಟಗಿ ಮತ್ತು ಎಸ್.ಜಿ. ಶೀಲವಂತ ಅವರನ್ನು ವೇದಿಕೆಯ ಗಣ್ಯರು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ರವೀಂದ್ರ ಬಸವನಾಳ ಉಪಸ್ಥಿತರಿದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

