
ಪಬ್ಲಿಕ್ ಸಮಾಚಾರ
ನವಲಗುಂದ: ದೀಪಾವಳಿ ಹಬ್ಬದ ಪ್ರಯುಕ್ತ ನವಲಗುಂದದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿಯವರು ತಮ್ಮ ಕುಟುಂಬದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿಯವರು, ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಹರುಷವನ್ನು ತರಲಿ. ನಾಡಿನೆಲ್ಲೆಡೆ ಉತ್ತಮ ಬೆಳೆಗಳಾಗಿ, ರೈತರ ಬಾಳು ಸಮೃದ್ಧಿ ನೀಡಲಿ ಎಂದು ಶುಭಹಾರೈಸಿದರು.
ಪುತ್ರನ ವಿವಾಹವೂ ಸಾಮೂಹಿಕ ಕಲ್ಯಾಣದಲ್ಲಿ:
ಇದೇ ಸಂದರ್ಭದಲ್ಲಿ ಪ್ರಮುಖ ವಿಷಯವನ್ನು ಪ್ರಕಟಿಸಿದ ಅವರು, ಬರುವ ಡಿಸೆಂಬರ್ ೭ ರಂದು ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈಗಿನ ಕಾಲದಲ್ಲಿ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗುವುದನ್ನು ಮನಗಂಡು, ಕ್ಷೇತ್ರದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಸದುದ್ದೇಶದಿಂದ ಈ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಮಹತ್ವ ಹೆಚ್ಚಿಸುವ ಸಲುವಾಗಿ ತಮ್ಮ ಮಗ ನವೀನಕುಮಾರ ಅವರ ವಿವಾಹವನ್ನೂ ಇದೇ ವೇದಿಕೆಯಲ್ಲಿ ನೆರವೇರಿಸಲು ನಿರ್ಧರಿಸಿರುವುದಾಗಿ ಕೋನರಡ್ಡಿ ಘೋಷಿಸಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಸಕ್ತ ವಧು-ವರರು ನವೆಂಬರ್ ೨೫ರ ಒಳಗಾಗಿ ಪಟ್ಟಣದಲ್ಲಿರುವ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಶಾಸಕ ಕೋನರಡ್ಡಿ ಮನವಿ ಮಾಡಿದರು.
ಪೂಜಾ ಕಾರ್ಯಕ್ರಮದಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಜನಾರ್ಧನ ಭಟ್ರಳ್ಳಿ, ಸದುಗೌಡ ಪಾಟೀಲ್, ಮೋದಿನ ಶಿರೂರು, ಪ್ರಕಾಶ ಶಿಗ್ಲಿ ಸೇರಿದಂತೆ ಪುರಸಭಾ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕ್ಷೇತ್ರದ ಮುಖಂಡರು ಭಾಗವಹಿಸಿ ಶಾಸಕ ಎನ್.ಎಚ್. ಕೋನರಡ್ಡಿಯವರಿಗೆ ದೀಪಾವಳಿ ಶುಭಾಶಯ ಕೋರಿದರು.

