ಹಟ್ಟಿ ಹಬ್ಬದ ದುರಂತ: ಹಾವೇರಿಜಿಲ್ಲೆಯಲ್ಲಿ ಹೋರಿ ತಿವಿದು ನಾಲ್ವರು ಬಲಿ, ಶೋಕ ಮಡುವು

Spread the love

ಹಾವೇರಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಹಟ್ಟಿ ಹಬ್ಬದ ಆಚರಣೆ ವೇಳೆ ಬುಧವಾರ ಸಂಭವಿಸಿದ ನಾಲ್ಕು ಪ್ರತ್ಯೇಕ ದುರಂತಗಳಲ್ಲಿ ಕೊಬ್ಬರಿ ಹೋರಿಗಳ ತಿವಿತಕ್ಕೆ ಸಿಲುಕಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಒಂದೇ ದಿನ ನಾಲ್ಕು ಪ್ರಾಣಹಾನಿ ಸಂಭವಿಸಿರುವುದು ಜಿಲ್ಲೆಯಲ್ಲಿ ಶೋಕದ ವಾತಾವರಣಕ್ಕೆ ಕಾರಣವಾಗಿದೆ.

ಹಾವೇರಿ ನಗರ, ಹಾನಗಲ್ಲ ಮತ್ತು ಹಾವೇರಿ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಈ ದುರ್ಘಟನೆಗಳು ನಡೆದಿವೆ. ಹಾವೇರಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಹೋರಿ ಹಬ್ಬದ ಸ್ಪರ್ಧೆಯ ಸಂದರ್ಭದಲ್ಲಿ ಓಡಿದ ಹೋರಿಯೊಂದು, ಹೊಸಮನಿ ಸಿದ್ದಪ್ಪ ವೃತ್ತದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಾನೇಶ್ವರ ನಗರ ನಿವಾಸಿ ೭೦ ವರ್ಷದ ಚಂದ್ರಶೇಖರ ಕೋಡಿಹಳ್ಳಿ ಎಂಬುವರಿಗೆ ತಿವಿದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿ, ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಹಟ್ಟಿ ಹಬ್ಬದ ಸ್ಪರ್ಧೆ ನೋಡಲು ಹೋಗಿದ್ದ ೨೪ ವರ್ಷದ ಭರತ ರಾಮಪ್ಪ ಹಿಂಗಮೇರಿ ಎಂಬ ಯುವಕ, ರೆಸ್ಟೋರೆಂಟ್‌ ಬಳಿ ನಿಂತಿದ್ದಾಗ ಶರವೇಗದಲ್ಲಿ ಓಡಿಬಂದ ಹೋರಿ ಗುದ್ದಿದ್ದರಿಂದ ನೆಲಕ್ಕೆ ಬಿದ್ದ. ತಲೆಗೆ ತೀವ್ರ ಪೆಟ್ಟಾಗಿದ್ದ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ರಾತ್ರಿ ಮೃತಪಟ್ಟಿದ್ದಾರೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ವೇಳೆ ಬೆದರಿ ಓಡಿದ ಎತ್ತೊಂದು, ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ೭೫ ವರ್ಷದ ಘನಿಸಾಬ ಮಹಮ್ಮದಹುಸೇನ್ ಬಂಕಾಪುರ ಎಂಬುವರಿಗೆ ತಿವಿದು ಗಾಯಗೊಳಿಸಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕನೇ ದುರಂತ ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಸಂಭವಿಸಿದ್ದು, ಬುಧವಾರ ತಮ್ಮದೇ ಹೋರಿಯನ್ನು ಹಿಡಿಯಲು ಹೋಗಿದ್ದ ಅದರ ಮಾಲೀಕ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ (೪೦) ಅವರು ಹೋರಿ ತಿವಿತದಿಂದ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶ್ರೀಕಾಂತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಶೋಧಾ ವಂಟಗೋಡಿ ಅವರು, ದೀಪಾವಳಿ ಹಬ್ಬದಂದು ಒಂದೇ ದಿನ ಹೋರಿ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಈ ಕುರಿತು ಪ್ರತ್ಯೇಕವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *