ಪೊಲೀಸ ಹುತಾತ್ಮರ ದಿನಾಚರಣೆ: ತ್ಯಾಗ, ಬಲಿದಾನ ಸ್ಮರಿಸಲು ಕರೆ

Spread the love

ಧಾರವಾಡ: ಸಮಾಜ ಮತ್ತು ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದೆ. ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ ಪಾಟೀಲ ಅವರು ಹೇಳಿದರು.

ಅವರು ಮಂಗಳವಾರದಂದು ಬೆಳಿಗ್ಗೆ ಪೊಲೀಸ್ ಹೆಡ್‌ಕ್ವಾಟರ್ಸ್‌ನಲ್ಲಿ ಧಾರವಾಡ ಜಿಲ್ಲಾ ಪೊಲೀಸ ಇಲಾಖೆ ಆಯೋಜಿಸಿದ್ದ ಪೊಲೀಸ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹುತಾತ್ಮರಾದ ಪೊಲೀಸ ಸಿಬ್ಬಂದಿಗಳ ಕುಟುಂಬಗಳಿಗೆ ಬೆಂಬಲ ಮತ್ತು ಸಹಕಾರ ನೀಡುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ನಾಗರಿಕರ ರಕ್ಷಣೆ ಮತ್ತು ಹಕ್ಕುಗಳನ್ನು ಕಾಪಾಡಲು ತಮ್ಮನ್ನು ಕರ್ತವ್ಯದಲ್ಲಿ ಅರ್ಪಿಸಿಕೊಂಡಿರುವ ಆರಕ್ಷಕರನ್ನು ಸದಾ ಗೌರವ, ಹೆಮ್ಮೆಯಿಂದ ಕಾಣಬೇಕು. ಸಮಾಜದ ಸಂರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡುವ ಅಥವಾ ದೈಹಿಕವಾಗಿ ಊನರಾಗುವ ಪೊಲೀಸರಿಗೆ ಹಾಗೂ ಅವರ ಕುಟುಂಬಗಳಿಗೆ ಪ್ರತಿಯೊಬ್ಬರೂ ಬೆಂಬಲ ಮತ್ತು ಗೌರವ ನೀಡಬೇಕು ಎಂದು ಸಿಇಓ ಪಾಟೀಲ ಅವರು ನುಡಿದರು.

ಪೊಲೀಸ ವ್ಯವಸ್ಥೆ ಸುಧಾರಣೆ, ಮೂಲಸೌಕರ್ಯ ಮತ್ತು ಸೌಲಭ್ಯಗಳ ಪೂರೈಕೆಗೆ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರವು ಸದಾ ಕಾಲ ಪೊಲೀಸರೊಂದಿಗೆ ಇರುತ್ತದೆ ಎಂದು ಅವರು ಭರವಸೆ ನೀಡಿದರು.

ಪೊಲೀಸ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅವರ ಸಹಕಾರ, ಬೆಂಬಲ ಮತ್ತು ಪ್ರೋತ್ಸಾಹದಿಂದಲೇ ಪೊಲೀಸರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪೊಲೀಸ ಇಲಾಖೆಗೆ ಆಧುನಿಕ ಸೌಲಭ್ಯ, ತರಬೇತಿ ಹಾಗೂ ಆಧುನೀಕರಣದ ಅಗತ್ಯವಿದೆ ಎಂದೂ ಹೇಳಿದರು.

ಪ್ರಾಮಾಣಿಕ ಸೇವೆ ನಮ್ಮೆಲ್ಲರ ಜವಾಬ್ದಾರಿ:
ವಿಶೇಷ ಆಹ್ವಾನಿತರಾಗಿದ್ದ ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಅವರು ಮಾತನಾಡಿ, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ. ಸಮಾಜದ ರಕ್ಷಣೆ ಮತ್ತು ಶಾಂತಿ ಕಾಪಾಡುವುದು ಕೇವಲ ಪೊಲೀಸರ ಹೊಣೆಗಾರಿಕೆ ಆಗಬಾರದು ಎಂದರು. ಪೊಲೀಸರ ನಿರಂತರ ಕಾವಲಿನಿಂದಲೇ ನಾವು ನೆಮ್ಮದಿಯಿಂದ ಇರಲು ಸಾಧ್ಯ. ದೇಶದ ಆಂತರಿಕ ಭದ್ರತೆಗೆ ಕಾರಣರಾದವರನ್ನು ಅಭಿಮಾನ ಮತ್ತು ಗೌರವದಿಂದ ಕಾಣಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪೊಲೀಸ ಹುತಾತ್ಮರ ನಾಮಸ್ಮರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳು, ಗಣ್ಯರು ಹಾಗೂ ಇತರರು ಹುತಾತ್ಮರ ಪೊಲೀಸ್ ಸ್ಮಾರಕಕ್ಕೆ ಪುಷ್ಪ ಚಕ್ರ (ರೀತ್) ಸಮರ್ಪಿಸಿದರು. ಪೆರೇಡ್ ಕಮಾಂಡರ್ ವಿಠ್ಠಲ ಆರೇರ ನೇತೃತ್ವದಲ್ಲಿ ಡಿಎಆರ್ ಪೊಲೀಸ ತಂಡಗಳಿಂದ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪೊಲೀಸ ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಂ. ಯಾದವಾಡ, ಸಿಇಎನ್ ಡಿಎಸ್‌ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋದ ಮುಕ್ತೇದಾರ, ಡಿಎಆರ್ ಡಿಎಸ್‌ಪಿ ಡಿ.ಎಸ್. ಧನಗರ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು, ಹುತಾತ್ಮ ಪೊಲೀಸ ಸಿಬ್ಬಂದಿಗಳ ಕುಟುಂಬ ಸದಸ್ಯರು, ನಿವೃತ್ತ ಪೊಲೀಸ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಡಿಎಆರ್ ವಿಭಾಗದ ಎಆರ್ ಎಸ್ಐಗಳಾದ ಎ.ಎಫ್. ಜಿಲ್ಲೇನವರ ಹಾಗೂ ವೈ.ಎಂ. ದೊಡ್ಡಮನಿ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *