ಮಾನಸಿಕ ಕಾಯಿಲೆಗಳಿಗೆ ನಿಖರ ಚಿಕಿತ್ಸೆ ಇದೆ; ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತಿ ಅವಶ್ಯ: ಡಾ. ರೂಪಾ ಕಿಣಗಿ

Spread the love

ನವಲಗುಂದ: ಮಾನಸಿಕ ಕಾಯಿಲೆಗಳ ಕುರಿತು ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಷ್ಟೋ ಜನರು ಮಾನಸಿಕ ಸಮಸ್ಯೆಗಳನ್ನು ‘ದೆವ್ವ ಹಿಡಿದಿದೆ’ ಅಥವಾ ‘ದೇವರು ಬಂದಿದೆ’ ಎಂದು ತಿಳಿದು ವೈದ್ಯರಲ್ಲಿ ಪರೀಕ್ಷಿಸದೆ, ಕಾಯಿಲೆ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಾರೆ. ಆದರೆ, ಪ್ರತಿಯೊಂದು ಮಾನಸಿಕ ಕಾಯಿಲೆಗೂ ನಿಖರವಾದ ಚಿಕಿತ್ಸೆ ಲಭ್ಯವಿದೆ ಎಂದು ಡಾ. ರೂಪಾ ಕಿಣಗಿ ಅವರು ತಿಳಿಸಿದರು.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಹಾಗೂ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ್ ಪರಕಾಳಿ ಅವರು ಮಾತನಾಡಿ, ಮಾನಸಿಕ ಆರೋಗ್ಯದ ಬಗ್ಗೆ ಶೇ. 53ರಷ್ಟು ಜನರಿಗೆ ಅರಿವು ಇಲ್ಲ. ಜಗತ್ತಿನಾದ್ಯಂತ ಪ್ರತಿ ಎಂಟು ಜನರಲ್ಲಿ ಒಬ್ಬರಿಗೆ ಮಾನಸಿಕ ಅಸ್ವಸ್ಥತೆ ಕಂಡುಬರುತ್ತಿದ್ದರೂ, ಕೇವಲ ಶೇ. 10 ರಿಂದ 15ರಷ್ಟು ಜನ ಮಾತ್ರ ಮಾನಸಿಕ ಆರೋಗ್ಯ ಕುರಿತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದರು. ಮಾನಸಿಕ ಅರಿವಿನ ಕೊರತೆ ಮತ್ತು ಕಳಂಕದಿಂದಾಗಿ ಚಿಕಿತ್ಸೆಯಿಂದ ದೂರ ಉಳಿಯುತ್ತಿರುವುದನ್ನು ಅವರು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಎಸ್. ಎನ್. ಡಂಬಳ, ಶರಣಪ್ಪ ಕಡ್ಲಿಬಿಷ್ಟಿ, ಲಿಂಗರಾಜ, ಡಾ. ವಿದ್ಯಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಎಲ್ಲ ಮಾನಸಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆ ಲಭ್ಯವಿರುವುದರಿಂದ ಸಾರ್ವಜನಿಕರು ಆರಂಭಿಕ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು.

Leave a Reply

Your email address will not be published. Required fields are marked *