
ದಾವಣಗೆರೆ: ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಬರೋಬ್ಬರಿ ₹150 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಆನ್ಲೈನ್ ವಂಚನೆ ಎಸಗಿದ್ದ ಅಂತರಾಜ್ಯ ಸೈಬರ್ ವಂಚಕರ ಜಾಲವನ್ನು ದಾವಣಗೆರೆ ಸೈಬರ್ ಕ್ರೈಂ (CEN) ಠಾಣೆ ಪೊಲೀಸರು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಂಧನದ ಮೂಲಕ ದೇಶಾದ್ಯಂತ ಸೈಬರ್ ಕಳ್ಳರ ಆಪರೇಷನ್ಗಳಿಗೆ ದಾವಣಗೆರೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ವಂಚನೆ ಬೆಳಕಿಗೆ ಬಂದಿದ್ದು ಹೇಗೆ?
ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಹಾಗೂ ಕಟ್ಟಡ ನಿರ್ಮಾಣ ವಲಯದ ಉದ್ಯಮಿ ಪ್ರಮೋದ್ ಎಚ್. ಎನ್. ಅವರಿಗೆ ಆದ ವಂಚನೆಯ ಪ್ರಕರಣದಿಂದ ಈ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಮೋದ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ₹52.60 ಲಕ್ಷ ಹಣವನ್ನು ಆರೋಪಿಗಳು ನೆಟ್ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಖಾತೆ ಬ್ಲಾಕ್ ಆಗಿದ್ದನ್ನು ಪರಿಶೀಲಿಸಿದಾಗ ಸೈಬರ್ ವಂಚನೆ ನಡೆದಿರುವುದು ದೃಢಪಟ್ಟಿತು. ಪ್ರಮೋದ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಅರೆಸ್ಟ್ ಮತ್ತು ಹಣ ಫ್ರೀಜ್:
ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಂಕಾಳಿ ನಾಗಪ್ಪ ನೇತೃತ್ವದ ಸೈಬರ್ ಕ್ರೈಂ ತಂಡವು ತನಿಖೆಯನ್ನು ಚುರುಕುಗೊಳಿಸಿ, ಹಾಸನ ಜಿಲ್ಲೆಯ ಬೇಲೂರು ಶಾಂತಿನಗರ ನಿವಾಸಿ ಸೈಯದ್ ಅರ್ಫಾತ್ ಪಾಷಾ (28) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ವೇಳೆ, ಜುಲೈ 27 ರಿಂದ ಆಗಸ್ಟ್ 19ರ ಅವಧಿಯಲ್ಲಿ ಆರೋಪಿಗಳು ಬೇರೆಯವರ ಬ್ಯಾಂಕ್ ಖಾತೆಗಳಿಂದ ಸುಮಾರು ₹150 ಕೋಟಿ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ₹132 ಕೋಟಿ ಹಣ ಈಗಾಗಲೇ ವಿತ್ಡ್ರಾ ಆಗಿದ್ದು, ಉಳಿದ ₹18 ಕೋಟಿ ಹಣವನ್ನು ಪೊಲೀಸರು ಕೂಡಲೇ ಬ್ಯಾಂಕ್ ಮೂಲಕ ಫ್ರೀಜ್ ಮಾಡಿಸಿದ್ದಾರೆ. ಕೋರ್ಟ್ ಆದೇಶದಂತೆ ದೂರುದಾರ ಪ್ರಮೋದ್ ಅವರಿಗೆ ಕಳವಾದ ಹಣವನ್ನು ಮರಳಿ ಕೊಡಿಸಲಾಗಿದೆ.
ದೇಶದ 127 ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ:
ಬಂಧಿತ ಆರೋಪಿ ಸೈಯದ್ ಅರ್ಫಾತ್ ಮತ್ತು ತಲೆಮರೆಸಿಕೊಂಡಿರುವ ಮೊದಲ ಆರೋಪಿ, ಹೈದರಾಬಾದ್ ಮೂಲದ ಉಬೇದ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 127 ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ದೃಢಪಟ್ಟಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಸೈಬರ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳಿವೆ. ಸೈಯದ್ ಅರ್ಫಾತ್ ಪಾಷಾ ಸಿ.ಸಿ.ಟಿ.ವಿ ಅಳವಡಿಸುವ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಸೈಬರ್ ವಂಚನೆಗೆ ಬಳಸಲಾದ ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಸೈಬರ್ ವಂಚನೆಯ ಹಿಂದಿರುವ ಅಂತರಾಜ್ಯ ಜಾಲದ ಕುರಿತು ತೀವ್ರ ತನಿಖೆ ಮುಂದುವರಿದಿದೆ.

