ದಾವಣಗೆರೆ ಉಪಚುನಾವಣೆ: ಸಚಿವ ಜಮೀರ್ ಹೆಸರಿನ ಆಡಿಯೋ ವೈರಲ್; ಷಡ್ಯಂತ್ರ ಎಂದ ಸಿರಾಜ್

Spread the love

ದಾವಣಗೆರೆ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉಪಚುನಾವಣೆಯ ಮತದಾನದ ದಿನವಾದ ಏಪ್ರಿಲ್ 9ರಂದು ಇಬ್ಬರ ನಡುವೆ ನಡೆದಿದೆ ಎನ್ನಲಾದ ಸುಮಾರು 3 ನಿಮಿಷ 50 ಸೆಕೆಂಡ್‌ಗಳ ಈ ಮಾತುಕತೆಯನ್ನು ‘ಕನ್ನಡ ಕಾಕ್ರೋಚ್’ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸೋಮವಾರ ಮುಂಜಾನೆ ಹಂಚಿಕೊಳ್ಳಲಾಗಿದೆ. ಉರ್ದು ಮತ್ತು ಕನ್ನಡ ಮಿಶ್ರಿತ ಈ ಸಂಭಾಷಣೆಯಲ್ಲಿ, ಕ್ಷೇತ್ರದ ಬೂತ್‌ಗಳಲ್ಲಿ ಎಸ್‌ಡಿಪಿಐ ಚಿಹ್ನೆಯಾದ ‘ಕುಕ್ಕರ್’ ಹೆಚ್ಚು ಚಾಲ್ತಿಯಲ್ಲಿದೆ ಎಂದು ಸಿರಾಜ್ ಅವರು ಜಮೀರ್ ಅವರಿಗೆ ಮಾಹಿತಿ ನೀಡುತ್ತಿರುವುದು ಕೇಳಿಬಂದಿದೆ. ಅಲ್ಲದೆ, ಎಸ್‌ಡಿಪಿಐಗೆ ಮತಗಳು ಬರುವಂತೆ ನೋಡಿಕೊಳ್ಳಲು ಸಾದಿಕ್ ಸಹೋದರನಿಗೆ 1.5 ಲಕ್ಷ ರೂಪಾಯಿ ಹಣ ನೀಡಿರುವುದಾಗಿ ಸಿರಾಜ್ ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸುವ ಜಮೀರ್ ಅಹ್ಮದ್ ಅವರು, ಯಾರನ್ನೂ ಒತ್ತಾಯಪೂರ್ವಕವಾಗಿ ಮನೆಯಿಂದ ಕರೆತರಬೇಡ, ನಮ್ಮವರಿಗೆ ಯಾವಾಗಲೂ ಕಾಂಗ್ರೆಸ್‌ಗೆ ಮತ ಹಾಕಿ ರೂಢಿಯಿದೆ. ಒಂದು ವೇಳೆ ಜನರು ಮನೆಯಿಂದ ಹೊರಬಂದರೆ ನಮಗೆ ಪ್ರಯೋಜನವಾಗದು. ಹೊರಬರುವವರು ಕೂಡ ಎಸ್‌ಡಿಪಿಐ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಹೇಳು ಎಂದು ಸೂಚಿಸಿದ್ದಾರೆ ಎನ್ನಲಾದ ಆಂಶಗಳು ಆಡಿಯೋದಲ್ಲಿವೆ. ಇದಲ್ಲದೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರೊಂದಿಗೆ ಮಾತನಾಡಿರುವುದಾಗಿ ಜಮೀರ್ ಹೇಳಿದ್ದಾರೆ ಎಂಬ ಮಾತುಗಳು ಸಂಚಲನ ಮೂಡಿಸಿವೆ. ನೂತನ ಸರ್ಕಾರ ರಚನೆ ಹಾಗೂ ಸಂಪುಟ ಪುನರ್ ರಚನೆಯ ಸಂದರ್ಭದಲ್ಲೇ ಈ ಆಡಿಯೋ ಹೊರಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದು ತಿರುಚಿದ ಆಡಿಯೋ, ನನ್ನ ವಿರುದ್ಧ ಷಡ್ಯಂತ್ರ: ಸಿರಾಜ್ ಸ್ಪಷ್ಟನೆ

ಈ ನಡುವೆ ತಾವೂ ಹಾಗೂ ಸಚಿವ ಜಮೀರ್ ಅಹ್ಮದ್ ಪಕ್ಷ ವಿರೋಧಿಯಾಗಿ ಮಾತನಾಡಿಲ್ಲ ಎಂದು ಕಾಂಗ್ರೆಸ್ ಉಚ್ಚಾಟಿತ ಮುಖಂಡ ಮೊಹಮ್ಮದ್ ಸಿರಾಜ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣವಾಗಿ ತಿರುಚಿದ, ಸತ್ಯಕ್ಕೆ ದೂರವಾದ ಆಡಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ನಾಯಕರನ್ನು ಗುರಿ ಮಾಡಿ ಗೂಬೆ ಕೂರಿಸುವ ಪ್ರಯತ್ನ ನಡೆಯಿತು. ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕವೂ ಈ ಷಡ್ಯಂತ್ರ ಮುಂದುವರಿದಿದ್ದು, ಸಚಿವ ಜಮೀರ್ ಅಹಮ್ಮದ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಸಂಪುಟ ಪುನರ್ ರಚನೆಯ ಸಮಯದಲ್ಲಿ ಈ ಆಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ದಾಸಕರಿಯಪ್ಪ ಅವರು ಪರಿಚಿತರಾಗಿದ್ದರೂ, ಚುನಾವಣೆಯ ಬಳಿಕ ಅವರೊಂದಿಗೆ ಮಾತನಾಡಿಲ್ಲ. ಮತದಾನದ ದಿನ ಮತ ಚಲಾಯಿಸಿ ಮನೆಗೆ ಬಂದು ಮಲಗಿದ್ದೆ, ಯಾರೊಂದಿಗೂ ಮಾತನಾಡಿಲ್ಲ. ಈ ಆಡಿಯೋ ಎಲ್ಲಿಂದ ಬಂದಿತು ಎಂಬ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *