
ನವಲಗುಂದ: ತಾಲ್ಲೂಕಿನಲ್ಲಿ ಸುರಿದಿರುವ ಭಾರಿ ಮಳೆಯಿಂದಾಗಿ ರೈತರಿಗೆ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ‘ಎಫ್ಐಡಿ’ ನೆಪ ಹೇಳುವುದನ್ನು ನಿಲ್ಲಿಸಿ, ಶೀಘ್ರದಲ್ಲಿಯೇ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಂಗಪ್ಪ ಮನಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ ಸುಧೀರ್ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ರೈತರು ತೀವ್ರ ಬೆಳೆ ನಷ್ಟ ಅನುಭವಿಸಿ, ಭಾರಿ ಹಾನಿಗೊಳಗಾಗಿದ್ದಾರೆ. ಈ ಬಗ್ಗೆ ಹಿಂದೆ ಹಲವು ಬಾರಿ ತಹಶೀಲ್ದಾರರ ಮೂಲಕವೇ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ಮನವಿ ಸಲ್ಲಿಸಿದ ಮುಖಂಡರು, “ಸರ್ಕಾರವು ಇನ್ನು 3-4 ದಿನಗಳಲ್ಲಿ ಎಫ್ಐಡಿ (FID) ನೆಪ ಹೇಳುವುದನ್ನು ಬಿಟ್ಟು, ನಷ್ಟಕ್ಕೊಳಗಾದ ಎಲ್ಲ ಬೆಳೆಗಳಿಗೆ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕು” ಎಂದು ಒತ್ತಾಯಿಸಿದರು.
ಪರಿಹಾರ ವಿಳಂಬ: ಉಗ್ರ ಪ್ರತಿಭಟನೆ ಎಚ್ಚರಿಕೆ
ಒಂದು ವೇಳೆ ಸರ್ಕಾರವು ಪರಿಹಾರ ನೀಡುವಲ್ಲಿ ಮತ್ತಷ್ಟು ವಿಳಂಬ ಮಾಡಿದರೆ, ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಘಟಕವು ಎಚ್ಚರಿಸಿದೆ. “ಪ್ರತಿಭಟನೆ ವೇಳೆ ಹೋರಾಟಗಾರರಿಗೆ ಯಾವುದೇ ರೀತಿಯ ತೊಂದರೆಯಾದರೆ, ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆಯಾಗುತ್ತದೆ” ಎಂದು ಬಿಜೆಪಿ ಮುಖಂಡ ಗಂಗಪ್ಪ ಮನಮಿ ಅವರು ಕಟ್ಟುನಿಟ್ಟಿನ ಹೇಳಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಸುಧೀರ್ ಸಾಹುಕಾರ ಅವರು, ಬೆಳೆಹಾನಿ ಪರಿಹಾರ ವಿಳಂಬದ ಸಂಬಂಧಿಸಿದಂತೆ ಬಿಜೆಪಿ ಮುಖಂಡರೊಂದಿಗೆ ಸ್ಥಳದಲ್ಲಿಯೇ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹುಬ್ಬಳ್ಳಿ ಮಂಡಲದ ಅಧ್ಯಕ್ಷ ಮಂಜುನಾಥ ಗಣಿ, ಶ್ರೀಮತಿ ಶಾಂತಾದೇವಿ ನೀಡುವಣಿ, ನಿಂಗಯ್ಯ ಬಣ್ಣದೋಲಮಠ, ದೇವರಾಜ ದಾಡಿಬಾವಿ, ಸಿದ್ದನಗೌಡ್ರ ಪಾಟೀಲ, ಎಸ್. ಬಿ. ದಾನಪ್ಪಗೌಡ್ರ, ಸಿದ್ದಣ್ಣ ಕೀಟಗೆರಿ, ರವಿ ಸವದತ್ತಿ, ಮಲ್ಲಿಕಾರ್ಜುನ ಸಂಗನಗೌಡ್ರ, ರಾಮನಗೌಡ್ರ ಸಂಕನಗೌಡ್ರ, ಸಾಯಿಬಾಬಾ ಆನೆಗುಂದಿ, ಬಸುರಾಜ ಕಾತರಕಿ, ಮಂಜುನಾಥ ಇಮ್ಮಡಿ, ಬಸುರಾಜ ಭ್ಯಾಹಟ್ಟಿ, ಮಂಜುನಾಥ ಹಡಪದ, ಈರಣ್ಣ ಮೆಣಸಿನಕಾಯಿ, ಶ್ರೀಧರ ಪಟ್ಟಣಶೆಟ್ಟಿ, ಮಂಜುನಾಥ ಜಾಲಗಾರ ಸೇರಿದಂತೆ ಎಲ್ಲಾ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.

