

ಬೆಂಗಳೂರು: ಅರಣ್ಯ ಸಂಪತ್ತು ಇಲ್ಲದೆ ಪ್ರಾಣಿ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ನಾಶ ಮಾಡಲು ಮುಂದಾಗುವವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜು ನೋಡದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿಗಳ ಪದಕ ವಿತರಿಸಿ ಅವರು ಮಾತನಾಡಿದರು.
ಹುಲಿಗಳಿಗೆ ವಿಷ ಹಾಕಿದರೆ ಸಹಿಸಲ್ಲ
”ಸಾಕಿದ ಹಸುವನ್ನು ಹುಲಿ ತಿಂದಿದೆ ಎನ್ನುವ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹುಲಿ, ಆನೆಗಳ ಹತ್ಯೆ ಅತ್ಯಂತ ಗಂಭೀರ ಅಪರಾಧಗಳು” ಎಂದು ಮುಖ್ಯಮಂತ್ರಿಗಳು ಪುನರುಚ್ಛರಿಸಿದರು. ಅರಣ್ಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಅವರು ಸೂಚಿಸಿದರು.
ಮಾನವ-ವನ್ಯಜೀವಿ ಸಹಬಾಳ್ವೆಗೆ ಒತ್ತು
ಮಾನವ-ವನ್ಯಜೀವಿ ಸಹಬಾಳ್ವೆಯ ಪರಿಸರ ಪೂರಕವಾದ ಆಶಯಕ್ಕಾಗಿ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ ಎಂದು ಸಿಎಂ ಹೇಳಿದರು. ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಭೂಮಿಯ ಉಳಿವು, ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಅಗತ್ಯ
ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷ ತಪ್ಪಿ ಸಹಬಾಳ್ವೆ ಏರ್ಪಡಬೇಕು. ಪ್ರಸ್ತುತ ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಈ ಹೆಮ್ಮೆಯ ನಡುವೆಯೇ, ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎನ್ನುವ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಮೋಘ ಸೇವೆ ಸಲ್ಲಿಸಿದ ಅರಣ್ಯ ಸಿಬ್ಬಂದಿಗಳಿಗೆ ಪದಕ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ರಾಯಭಾರಿ ಅನಿಲ್ ಕುಂಬ್ಳೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

