

ಧಾರವಾಡ: ಈ ದೇಶದ ವಾಲ್ಮೀಕಿ ಸಮುದಾಯವು ವೀರ ಮತ್ತು ಧೀರರಾಗಿದ್ದು, ಅನೇಕ ಕೋಟೆ ಮತ್ತು ನಾಡನ್ನು ಆಳಿದ ರಾಜವಂಶಜರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶಪ್ರಾಯರಾಗಿದ್ದು, ಅವರಂತೆಯೇ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ನ ನೂತನ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರು ಹೇಳಿದರು.
ಅವರು ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ರಾಮಾಯಣ ಮಹಾಕಾವ್ಯ ಜನಾಂಗಕ್ಕೆ ಪ್ರೇರಣೆ’
ಮಹರ್ಷಿ ವಾಲ್ಮೀಕಿ ಅವರನ್ನು ಕಳ್ಳ, ದರೋಡೆಕೋರ ಎಂದು ಭಾವಿಸುವುದು ತಪ್ಪು. ಅವರ ರಾಮಾಯಣ ಮಹಾಕಾವ್ಯದ ಸಾಧನೆ ಇಡೀ ಜನಾಂಗಕ್ಕೆ ಪ್ರೇರಣೆಯಾಗಬೇಕು. ವಾಲ್ಮೀಕಿ ಓರ್ವ ಪ್ರಕಾಂಡ ಪಂಡಿತರಾಗಿದ್ದು, ರಾಮಾಯಣದಲ್ಲಿನ ಶ್ಲೋಕಗಳು ಮತ್ತು ಖಂಡಗಳು ಅವರ ಪಾಂಡಿತ್ಯವನ್ನು ತೋರಿಸುತ್ತವೆ. ಇದು ವಿಶ್ವಮಟ್ಟದಲ್ಲಿ ಭಾರತದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದು ಜಕ್ಕಪ್ಪನವರ ಹೇಳಿದರು.
ದೇಶದಲ್ಲಿ ಸುಮಾರು 18 ಕೋಟಿ ವಾಲ್ಮೀಕಿ ಸಮುದಾಯವಿದೆ. ವಾಲ್ಮೀಕಿ ಸಮುದಾಯ ಸೇರಿದಂತೆ ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದರು. ಸಹಕಾರಿ ರಂಗದಲ್ಲಿ ವಾಲ್ಮೀಕಿ ಸಮುದಾಯದವರು ಪಾಲ್ಗೊಳ್ಳಬೇಕು ಹಾಗೂ ವಾಲ್ಮೀಕಿ ಜಿಲ್ಲಾ ಸಹಕಾರಿ ಸಂಘ ರಚನೆಗೆ ಸಮಾಜದ ಪ್ರಮುಖರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.
ವಾಲ್ಮೀಕಿ – ಸ್ವಾಭಿಮಾನದ ಪ್ರತೀಕ
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ ಅವರು, “ಮಹರ್ಷಿ ವಾಲ್ಮೀಕಿ ಅವರನ್ನು ನಾವೆಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ಅನಕ್ಷರಸ್ಥರಾಗಿದ್ದ ವಾಲ್ಮೀಕಿ, ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯವನ್ನು ನೀಡಿ ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಅವರ ಜೀವನದ ಪಾಠವು ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು” ಎಂದರು. “ಮಹರ್ಷಿ ವಾಲ್ಮೀಕಿ ಅವರು ನೀಡಿದ ರಾಮಾಯಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಸ್ಮರಿಸುತ್ತ, ನಮ್ಮ ಸಮುದಾಯದವರ ಸಾಧನೆಗೆ ನಾವು ಹೆಮ್ಮೆ ಪಡಬೇಕು” ಎಂದು ಹೇಳಿದರು.
ಕವಿವಿಯಲ್ಲಿ ಅಧ್ಯಯನ ಪೀಠ ಕಟ್ಟಡಕ್ಕೆ ಆಗ್ರಹ
ಕವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಕಲ್ಮೇಶ ಹಾವೇರಿಪೇಟ ಮಾತನಾಡಿ, ಕವಿವಿಯ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠದ ಕಟ್ಟಡ ಕಾಮಗಾರಿಯನ್ನು ಬೇಗ ಆರಂಭಿಸಬೇಕು. ವಾಲ್ಮೀಕಿ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಸಮುದಾಯದಲ್ಲಿ ಬೆಳೆಸಬೇಕೆಂದು ಆಗ್ರಹಿಸಿದರು.
ಕೆಸಿಡಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶರಣು ಮುಷ್ಠಿಗೇರಿ ಅವರು ಮಹರ್ಷಿ ವಾಲ್ಮೀಕಿಯವರ ಜೀವನ, ಬದುಕು, ವಾಲ್ಮೀಕಿ ರಾಮಾಯಣ ಹಾಗೂ ವಾಲ್ಮೀಕಿ ಸಮುದಾಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸತ್ಯದ ದಾರಿಯೇ ರಾಮಾಯಣ: ಜಿಲ್ಲಾಧಿಕಾರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ನಮ್ಮ ರಾಷ್ಟ್ರ ಕಂಡ ಮಹಾಪುರುಷ. ಭಾರತವು ಕಂಡ ಎಲ್ಲ ಮಹಾಪುರುಷರು ತಮ್ಮ ಜೀವನದ ಪಾಠಗಳು ಮತ್ತು ಸಂದೇಶಗಳಿಂದ ಮಹಾತ್ಮರಾಗಿದ್ದಾರೆ. ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವು ಸತ್ಯದ ದಾರಿ ಮತ್ತು ನಮ್ಮ ಜೀವನಕ್ಕೆ ಬದುಕುವ ಮಾರ್ಗವಾಗಿದ್ದು, ಅದನ್ನು ಅರಿತು ನಡೆಯಬೇಕು ಎಂದು ತಿಳಿಸಿದರು.
ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಮೋಹನ ಗುಡಿಸಲಮನಿ ಅವರು ಸಮುದಾಯದ ಕೊಡುಗೆ ಮತ್ತು ಮುಂದಿರುವ ಸವಾಲುಗಳ ಕುರಿತು ಮಾತನಾಡಿದರು. ವಿದ್ಯಾರ್ಥಿ ಎಚ್. ಶ್ರೀನಿವಾಸ ಅವರು ರಾಮಾಯಣದ ಕುರಿತು ವಿವರಿಸಿದರು.
ಗಣ್ಯರ ಉಪಸ್ಥಿತಿ ಹಾಗೂ ಸನ್ಮಾನ
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮುಖಂಡರಾದ ಎಂ. ಅರವಿಂದ, ಪರಮೇಶ ಕಾಳೆ, ಸುಶೀಲಾ ಚಲವಾದಿ, ಪರಮೇಶ ಕಟ್ಟಿಮನಿ ಸೇರಿದಂತೆ ಜಿಲ್ಲಾ ಹಾಗೂ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಸಫಾಯಿ ಕರ್ಮಚಾರಿಗಳ ಜಾಗೃತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ ಗುಂಡಣ್ಣವರ ಸ್ವಾಗತಿಸಿದರು. ಜಂಟಿ ನಿರ್ದೇಶಕಿ ಪಿ. ಶುಭ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ ವಂದಿಸಿದರು. ಪ್ರವೀಣ ಮಸ್ಕಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಸಾಧಕರನ್ನು ಹಾಗೂ ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಲಾಭವನ ಆವರಣದಲ್ಲಿ ಮುಕ್ತಾಯಗೊಂಡಿತು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್ ಸೇರಿದಂತೆ ವಿವಿಧ ಅಧಿಕಾರಿಗಳು, ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರಗು ತಂದವು.

