
ಕುಂದಗೋಳ: ಬೆಳೆ ಸಾಲದ ಭಾರವನ್ನು ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲ್ಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಸೆ: 05 ರಂದು ವರದಿಯಾಗಿದೆ. ಮೃತರನ್ನು ಹಜರೇಸಾಬ,
ಬುಡ್ಡೆಸಾಬ ತಹಶೀಲ್ದಾರ (75) ಎಂದು ಗುರುತಿಸಲಾಗಿದೆ.
ಸಾಲ ಮರುಪಾವತಿ ಚಿಂತೆಯಿಂದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದು, ಈ ಕಾರಣಕ್ಕಾಗಿಯೇ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯರೇಬೂದಿಹಾಳ ಗ್ರಾಮದ ನಿವಾಸಿಯಾಗಿದ್ದ ಹಜರೇಸಾಬ ತಹಶೀಲ್ದಾರ ಅವರು ತಮ್ಮ 3 ಎಕರೆ 2 ಗುಂಟೆ ಜಮೀನಿನಲ್ಲಿ ಗೋವಿನ ಜೋಳ ಪೀಕನ್ನು ಬೆಳೆದಿದ್ದರು. ಈ ಕೃಷಿ ಚಟುವಟಿಕೆಗಾಗಿ ಅವರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ ಒಟ್ಟು ರೂ. 2,00,000/- (ಎರಡು ಲಕ್ಷ ರೂಪಾಯಿ) ಬೆಳೆ ಸಾಲ ಮಾಡಿಕೊಂಡಿದ್ದರು. ಫಸಲಿನ ನಿರೀಕ್ಷೆಯು ವಿಫಲವಾದ ಕಾರಣ, ಮಾಡಿದ ಸಾಲವನ್ನು ಮರುಪಾವತಿಸುವುದು ಹೇಗೆ ಎಂಬ ತೀವ್ರ ಮಾನಸಿಕ ಚಿಂತೆಯಿಂದ ಅವರು ಇಂದು ಗ್ರಾಮದ ಬಸವಣ್ಯಪ್ಪ ಮಾಗಿನಮನಿ ಅವರ ಹೊಲದ ಬದುವಿನಲ್ಲಿರುವ ಬೇವಿನ ಮರದ ಟೊಂಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

