ದೇಶದ ಹಿತವೇ ಮುಖ್ಯ: ಶಿಕ್ಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ತಜ್ಞರ ಕರೆ

Spread the love

ಧಾರವಾಡ: ಜಾತಿ ಮತ್ತು ಧರ್ಮಕ್ಕಿಂತಲೂ ದೇಶದ ಹಿತಾಸಕ್ತಿಯೇ ಮುಖ್ಯ. ಧರ್ಮ ಯಾವುದೇ ಇರಲಿ, ನಾವೆಲ್ಲರೂ ಭಾರತೀಯರು ಎಂಬ ಉದಾತ್ತ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಸಾಯಿ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು.

​ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ. ಸಂಘ) “ಶಿಕ್ಷಣ ಮಂಟಪ”ವು, ಸಾಯಿ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಶಿಕ್ಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ’ ವಿಷಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಏಳಿಗೆಯೇ ನಮ್ಮೆಲ್ಲರ ಧ್ಯೇಯವಾಗಬೇಕು. ಎಲ್ಲಾ ಮತ-ಪಂಥಗಳ ಜೀವನ ಶೈಲಿ ಮತ್ತು ನೀತಿ-ನಿಯಮಗಳ ಕುರಿತು ಗೌರವ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂದರು. ಬಸವಾದಿ ಶರಣರು ಮತ್ತು ಭಕ್ತಿ ಪಂಥದ ಪ್ರತಿಪಾದಕರು ಸಹ ಸರ್ವಸಮಾನತೆಯನ್ನು ತರಲು ಸಾಮರಸ್ಯದ ಬದುಕೇ ಶ್ರೇಷ್ಠ ಎಂದು ಸಾರಿದ್ದರು ಎಂದು ಅವರು ಹೇಳಿದರು.

​ಜಾತಿಯ ವಿಷ ಬೀಜ ದೇಶದ ಪ್ರಗತಿಗೆ ಕಪ್ಪು ಚುಕ್ಕೆ:

​ಧಾರವಾಡ ಜಿಲ್ಲಾ ಇತಿಹಾಸ ಬೋಧಕರ ಸಂಘದ ಅಧ್ಯಕ್ಷ ಉದಯ ನಾಯಕ ಅವರು ಉಪನ್ಯಾಸ ನೀಡಿ, “ದೇಶದ ಪ್ರಗತಿಯ ಪಥದಲ್ಲಿ ಜಾತಿಯ ವಿಷ ಬೀಜ ಕಪ್ಪು ಚುಕ್ಕೆಯಾಗಿದೆ. ನಮ್ಮ ಜಾತಿ-ಧರ್ಮ, ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ ನಾವೆಲ್ಲಾ ಭಾರತೀಯರು ಎಂಬ ಉದಾತ್ತ ಭಾವನೆಯೇ ಮುಖ್ಯ. ವೈವಿಧ್ಯತೆಯಲ್ಲಿ ಏಕತೆ ನಮ್ಮೆಲ್ಲರ ಸಂಸ್ಕೃತಿಯಾಗಬೇಕು. ನಾವೆಲ್ಲಾ ಪರಸ್ಪರ ದ್ವೇಷ, ಅಸೂಯೆ ದೂರವಿರಿಸಿ ಅನೋನ್ಯತೆಯಿಂದ ಬಾಳಬೇಕು” ಎಂದು ಕರೆ ನೀಡಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡೈಟ್ ನಿವೃತ್ತ ಉಪನ್ಯಾಸಕ ಕೆ.ಜಿ. ದೇವರಮನಿ ಮಾತನಾಡಿ, “ಈ ಭಾವೈಕ್ಯತೆಯ ಭಾವನೆ ಮೊದಲು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ಧರ್ಮ, ಜಾತಿಗಿಂತ ಮಾನವೀಯತೆ ಶ್ರೇಷ್ಠ ಎಂಬ ಭಾವನೆಯನ್ನು ನಾವೆಲ್ಲಾ ಅಳವಡಿಸಿಕೊಳ್ಳಬೇಕು” ಎಂದರು.

​ಸವಿತಾ ಕರಿಕಟ್ಟಿ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮೌನೇಶ ಬಡಿಗೇರ ನಿರೂಪಿಸಿದರು. ಎಂ. ಜಿ. ಸುಬೇದಾರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *