
ಧಾರವಾಡ: ಖ್ಯಾತ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರ ಡಾ. ಎಸ್.ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ. ತಮ್ಮ ಅಮೂಲ್ಯ ಕಾದಂಬರಿಗಳ ಮೂಲಕ ಅವರು ಓದುಗರ ದೊಡ್ಡ ಬಳಗವನ್ನೇ ಸೃಷ್ಟಿಸಿದವರು ಎಂದು ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು (ಕ.ವಿ.ವ. ಸಂಘ) ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು:
ಆಕಾಶವಾಣಿ ಧಾರವಾಡದ ನಿವೃತ್ತ ನಿರ್ದೇಶಕ ಬಸು ಬೇವಿನಗಿಡದ ಅವರು ಮಾತನಾಡಿ, “ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು ಮೂಡಿಸಿದ ಎಸ್.ಎಲ್. ಭೈರಪ್ಪನವರ ಎಲ್ಲಾ 26 ಕಾದಂಬರಿಗಳಿಗೆ ಎಂದೂ ಸಾವಿಲ್ಲ. ಅವರ ಬರವಣಿಗೆಯಲ್ಲಿ ಒಂದು ಮಾಂತ್ರಿಕ ಶಕ್ತಿ ಇದೆ. ಕಾದಂಬರಿ ಕ್ಷೇತ್ರವನ್ನು ಶ್ರೀಮಂತಗೊಳಿಸಿ, ಜೀವಂತ ಇಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ನುಡಿದರು.
ಡಾ. ಶಶಿಧರ ನರೇಂದ್ರ ಮಾತನಾಡಿ, ಅವರ ‘ಧರ್ಮಶ್ರೀ’ ಹಾಗೂ ‘ವಂಶವೃಕ್ಷ’ ಕಾದಂಬರಿಗಳು ಮನೋಜ್ಞವಾಗಿದ್ದು 60 ವರ್ಷಗಳ ನಂತರವೂ ಸ್ಮೃತಿ ಪಟಲದಲ್ಲಿ ಉಳಿಯುವಂತವುಗಳು. ಭೈರಪ್ಪನವರು ಕಾದಂಬರಿ ಯುಗದ ಯುಗ ಪ್ರವರ್ತಕರು ಎಂದು ಬಣ್ಣಿಸಿದರು.
ಕಾದಂಬರಿಗಳ ಮೂಲಕ ನವ ಸಮಾಜ ಸೃಷ್ಟಿ:
ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದ ಡಾ. ಅರವಿಂದ ಯಾಳಗಿ, ಗುರುಸ್ವಾಮಿ ಡೋಣೂರಮಠ, ಶರಭೇಂದ್ರಸ್ವಾಮಿ, ಶ್ರೀಕಾಂತ ದಳವಾಯಿ ಸೇರಿದಂತೆ ಹಲವು ಗಣ್ಯರು, ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಕನ್ನಡದ ಗಡಿದಾಟಿ ತೆಲುಗು, ತಮಿಳು, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿರುವುದನ್ನು ಸ್ಮರಿಸಿದರು.
”ಅವರು ಕಾದಂಬರಿಗಳ ಮೂಲಕ ಹೊಸದೊಂದು ಸಮಾಜ ಸೃಷ್ಟಿಸಿದವರು. ಕನ್ನಡ ಕಾದಂಬರಿಗಳಿಗೆ ವಿಶ್ವ ಮಾನ್ಯತೆ ತಂದು ಕೊಟ್ಟ ಧೀಮಂತ ವ್ಯಕ್ತಿತ್ವ ಅವರದು. ಎಲ್ಲಾ ವಯೋಮಾನದ ತಲ್ಲಣಗಳನ್ನು ತಮ್ಮ ಬರವಣಿಗೆಯ ಮೂಲಕ ನವ ಸಮಾಜ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸಂಗೀತದ ಬಗ್ಗೆ ಅಪಾರ ಶ್ರದ್ಧೆಯುಳ್ಳವರಾಗಿದ್ದರು ಮತ್ತು ಗೋವಾದ ಅನೇಕ ಮುತ್ಸದ್ಧಿಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು” ಎಂದು ಗಣ್ಯರು ಅಭಿಪ್ರಾಯಪಟ್ಟರು.
‘ನಾನೇಕೆ ಬರೆಯುತ್ತೇನೆ?’ ಹಾಗೂ ‘ಭತ್ತಿ’ ಅವರ ಆತ್ಮಕಥೆಗಳು ಮನೋಜ್ಞವಾಗಿವೆ. ಅವರ ಕೆಲವು ಲೇಖನಗಳು ವಿವಾದಕ್ಕೆ ಎಡೆಮಾಡಿಕೊಟ್ಟರೂ, ಅವರು ತಮ್ಮ ನಿಷ್ಠುರತೆಗೆ ಸದಾ ಬದ್ಧರಾಗಿದ್ದರೆಂದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.
ಪ್ರಿ. ಶಶಿಧರ ತೋಡಕರ ಸ್ವಾಗತಿಸಿ, ನಿರೂಪಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಕಾಂತ ಬೆಲ್ಲದ, ವೀರಣ್ಣ ಒಡ್ಡೀನ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

