ಯರಗುಪ್ಪಿಯಲ್ಲಿ ವಾಣಿಜ್ಯ ಸಿಲಿಂಡರ್ ಸ್ಪೋಟ: ಅಂದಾಜು 6 ಲಕ್ಷ ರೂ. ಮೌಲ್ಯದ ಹೋಟೆಲ್ ಸಾಮಗ್ರಿ ಸುಟ್ಟು ಭಸ್ಮ

Spread the love

ಕುಂದಗೋಳ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಧ್ಯರಾತ್ರಿ ವಾಣಿಜ್ಯ ಬಳಕೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

​ಯರಗುಪ್ಪಿ ಗ್ರಾಮದ ಸಂಜೀವರೆಡ್ಡಿ ತಹಶೀಲ್ದಾರ್ ಎಂಬುವವರಿಗೆ ಸೇರಿದ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಧ್ಯರಾತ್ರಿಯ ವೇಳೆಗೆ ಹೋಟೆಲ್‌ನ ಒಳಗಿದ್ದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೋಟೆಲ್‌ನ ಶೆಟರ್ ಮುರಿದು ಹೋಗಿದ್ದು, ಒಳಭಾಗದಲ್ಲಿದ್ದ ಎಲ್ಲ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

​ಆರು ಲಕ್ಷ ರೂ. ಮೌಲ್ಯದ ವಸ್ತುಗಳು ನಾಶ:

​ಸಿಲಿಂಡರ್ ಸ್ಫೋಟದ ರಭಸಕ್ಕೆ ಹೋಟೆಲ್‌ನಲ್ಲಿ ನಿತ್ಯ ಬಳಕೆಯ ಪಾತ್ರೆಗಳು, ಟೆಬಲ್‌ಗಳು, ಕಿರಾಣಿ ವಸ್ತುಗಳು, ಇತರೆ ಹೋಟೆಲ್ ಸಾಮಗ್ರಿಗಳು ಮತ್ತು ಹೋಟೆಲ್ ಒಳಗೆ ನಿಲ್ಲಿಸಲಾಗಿದ್ದ ಬೈಕ್ ಸಹಿತ ಅಂದಾಜು 6 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಹೋಟೆಲ್ ಮಾಲೀಕರು ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.

​ಈ ಘಟನೆ ಮಧ್ಯರಾತ್ರಿ ಸಂಭವಿಸಿದ್ದರಿಂದ ಯಾವುದೇ ಜೀವಹಾನಿ ಸಂಭವಿಸದಿರುವುದು ನೆಮ್ಮದಿಯ ಸಂಗತಿ. ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *