
ಧಾರವಾಡ: ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮಹತ್ವಕಾಂಕ್ಷೆಯ ಯೋಜನೆಯಾದ ಅಕ್ಕ-ಕೆಫೆ (ಸಂಜೀವಿನಿ) ಇಂದು ಧಾರವಾಡದಲ್ಲಿ ಉದ್ಘಾಟನೆಗೊಂಡಿತು. ಕಬ್ಬೆನೂರು ಗ್ರಾಮದ ಕಾಮದೇನು ಮಹಿಳಾ ಸ್ವಸಹಾಯ ಸಂಘ ನಿರ್ವಹಿಸುವ ಈ ಕೆಫೆಯನ್ನು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಉದ್ಘಾಟಿಸಿ ಶುಭ ಕೋರಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಮೀಪದ ಕಟ್ಟಡದಲ್ಲಿ ಆರಂಭಿಸಲಾದ ಈ ‘ಅಕ್ಕ-ಕೆಫೆ’ಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸಂತೋಷ್ ಲಾಡ್, “ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿಯಾನದ ಪ್ರಮುಖ ಉದ್ದೇಶ ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಾಗಿದೆ. ಸ್ವಸಹಾಯ ಗುಂಪುಗಳ ಮಹಿಳೆಯರೇ ನಿರ್ವಹಿಸುವ ಈ ಅಕ್ಕ-ಕೆಫೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಕೊಡುಗೆಯಾಗಲಿದೆ” ಎಂದರು.
ಮಹಿಳಾ ಸ್ವಾವಲಂಬನೆಗೆ ಸರ್ಕಾರ ಬೆಂಬಲ:
ಸರ್ಕಾರವು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸಂಘಟಿಸಿ, ಅವರಿಗೆ ಕೃಷಿ ಮತ್ತು ಕೃಷಿಯೇತರ ವಿಭಾಗಗಳಲ್ಲಿ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುತ್ತಿದೆ. ಮಹಿಳೆಯರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ನಿರಂತರ ಬೆಂಬಲ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ಸಮಾಜದ ಮುಖ್ಯವಾಹಿನಿಗೆ ಮಹಿಳೆಯರನ್ನು ತರಲು ಅಗತ್ಯ ಸಾಮರ್ಥ್ಯಾಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
50 ಕೆಫೆ ಸಂಜೀವಿನಿ ಆರಂಭಕ್ಕೆ ಅನುಮೋದನೆ:
ಮಹಿಳೆಯರ ಜೀವನೋಪಾಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು 2024-25ನೇ ಸಾಲಿನ ಆಯವ್ಯಯದಲ್ಲಿ ಅಕ್ಕ-ಕೆಫೆ (ಸಂಜೀವಿನಿ) ಕಾರ್ಯಕ್ರಮ ಘೋಷಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಶುಚಿರುಚಿಯಾದ ಸ್ಥಳೀಯ ಆಹಾರವನ್ನು ಕೈಗೆಟಕುವ ದರದಲ್ಲಿ ಒದಗಿಸಲು ಮಹಿಳೆಯರೇ ನಡೆಸುವ 50 ‘ಕೆಫೆ ಸಂಜೀವಿನಿ’ (ಅಕ್ಕ ಕೆಫೆ) ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. ಇದರ ಭಾಗವಾಗಿ, ಧಾರವಾಡ ಜಿಲ್ಲಾ ಕೇಂದ್ರ ಮತ್ತು ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಕ್ಕ ಕೆಫೆಯನ್ನು ಆರಂಭಿಸಲಾಗುತ್ತಿದೆ ಎಂದರು. ಧಾರವಾಡ ಜಿಲ್ಲೆಗೆ ಈಗಾಗಲೇ ಎರಡು ಅಕ್ಕ ಕೆಫೆಗಳ ಸ್ಥಾಪನೆಗೆ ಅನುಮೋದನೆ ದೊರೆತು ಅನುದಾನ ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್. ಎಚ್. ಕೋನರಡ್ಡಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪಾಟೀಲ್, ಪ್ರಭಾರ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓ ಭುವನೇಶ ದೇವಿದಾಸ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಕಾಮದೇನು ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ರಾಜಶ್ರೀ ಮಂಜುನಾಥ ಪವಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

