ದಸರಾ ರಜೆಯ ಮಜಾ ದುರಂತದಲ್ಲಿ ಅಂತ್ಯ: ಸಿಂಧುದುರ್ಗ ಸಮುದ್ರದಲ್ಲಿ ಮುಳುಗಿ ಬೆಳಗಾವಿಯ ಮೂವರ ಸಾವು

Spread the love

ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬಕ್ಕೆ ಆಘಾತ; ನಾಲ್ವರು ನಾಪತ್ತೆ, ಓರ್ವ ಮಹಿಳೆ ಸ್ಥಿತಿ ಗಂಭೀರ

ಬೆಳಗಾವಿ: ದಸರಾ ರಜೆಗಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಈ ದುರಂತದಿಂದ ಲೋಂಡಾ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.

ಮೂವರು ಬಾಲಕರು ಸಾವು, ಓರ್ವ ಮಹಿಳೆ ಗಂಭೀರ

​ದುರಂತದಲ್ಲಿ ಮೃತರಾದವರನ್ನು ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ನಿವಾಸಿಗಳಾದ ಇಸ್ರಾರ್ ಕಿತ್ತೂರ (17), ಇಬಾದ್ ಕಿತ್ತೂರ (13) ಮತ್ತು ಅಳ್ಳಾವರ ಮೂಲದ ನಮೀರಾ ಅಕ್ತರ್ (16) ಎಂದು ಗುರುತಿಸಲಾಗಿದೆ.

​ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ನೀರಿನೆಡೆಯಿಂದ ಹೊರತೆಗೆಯಲಾಗಿದ್ದು, ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರು ನಾಪತ್ತೆ, ಶೋಧ ಕಾರ್ಯ ಚುರುಕು

​ಸಮುದ್ರದಲ್ಲಿ ಕಣ್ಮರೆಯಾಗಿರುವವರ ಪೈಕಿ ಇರ್ಫಾನ್ ಕಿತ್ತೂರ (36), ಇಕ್ವಾನ್ ಕಿತ್ತೂರ (15) ಹಾಗೂ ಮಹಾರಾಷ್ಟ್ರ ಮೂಲದ ಪರಯಾನ್ ಮನಿಯರ್ (20) ಮತ್ತು ಜಾಕಿರ್ ಮನಿಯರ್ (13) ಸೇರಿದ್ದಾರೆ.

​ಈ ನಾಲ್ವರಿಗಾಗಿ ಸ್ಥಳೀಯ ಪೊಲೀಸ್ ಮತ್ತು ರಕ್ಷಣಾ ತಂಡಗಳು ಸಮುದ್ರ ತೀರದಲ್ಲಿ ತೀವ್ರ ಹುಡುಕಾಟ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಹಲವರು ಸಮುದ್ರ ಪಾಲಾಗಿರುವುದು ಲೋಂಡಾ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *